ಬೆಂಗಳೂರು ಟ್ರಾಫಿಕ್ ಗೆ ಸಿಲುಕಿ ತುರ್ತು ಚಿಕಿತ್ಸೆ ಸಿಗದೆ ಒಂದುವರೆ ವರ್ಷದ ಮಗು ಬಲಿ. ಬೆಂಗಳೂರು,ಫೆಬ್ರವರಿ,3,2023(..):ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಯೊಬ್ಬರೂ ಟ್ರಾಫಿಕ್​ನಿಂದ ಹೈರಾಣಾಗಿದ್ದಾರೆ. ಈ ಮಧ್ಯೆ ಟ್ರಾಫಿಕ್ ನಲ್ಲಿ ಅಂಬ್ಯುಲೆನ್ಸ್ ಸಿಲುಕಿದ ಹಿನ್ನೆಲೆ ಆಸ್ಪತ್ರೆಗೆ ರವಾನಿಸಲು ತಡವಾಗಿ ತುರ್ತು ಚಿಕಿತ್ಸೆ ಸಿಗದೆ ಒಂದೂವರೆ ವರ್ಷದ ಮಗು ಬಲಿಯಾದ ಮನಕಲಕುವ ನಡೆದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು ಹುದಾ ಕೌಸರ್​​ ನೆಲಮಂಗಲ ಬಳಿ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಂಡು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಲಾಗದೆ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಿದೆ. ನಿನ್ನೆ ತುಮಕೂರು ಜಿಲ್ಲೆ ತಿಪಟೂರಿನ ಕೈಮರಾ ಬಳಿ ಬುಲೆರೋ ವಾಹನ ಹಾಗು ಬೈಕ್ ನಡುವೆ ಅಪಘಾತ ಸಂಭವಿಸಿ ಅಹಮದ್​​, ರುಕ್ಸಾನಾ ದಂಪತಿ ಹಾಗೂ ಪುತ್ರಿ ಹುದಾ ಕೌಸರ್ ಗಾಯಗೊಂಡಿದ್ದರು. ಈ ವೇಳೆ ತಂದೆ ಅಹಮದ್​​, ತಾಯಿ ರುಕ್ಸಾನಾಗೆ ತಿಪಟೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹಾಸನ ಹಿಮ್ಸ್​​ ಗೆ ರವಾನಿಸಲಾಗಿತ್ತು. ಬಳಿಕ ಹಿಮ್ಸ್​​​ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಗುವನ್ನ ಬೆಂಗಳೂರಿಗೆ ರವಾನಿಸಲು ಆ್ಯಂಬುಲೆನ್ಸ್ ಮೂಲಕ ತೆರಳುತ್ತಿದ್ದ ವೇಳೆ ನೆಲಮಂಗಲ ಬಳಿ ಟ್ರಾಫಿಕ್​ ಜಾಮ್ ಗೆ ಆ್ಯಂಬುಲೆನ್ಸ್ ಸಿಲುಕಿದೆ. ಟ್ರಾಫಿಕ್​ನಿಂದ ಆಸ್ಪತ್ರೆಗೆ ತೆರಳಲಾಗದೆ ಒಂದೂವರೆ ವರ್ಷದ ಹುದಾ ಮೃತಪಟ್ಟಿದ್ದಾಳೆ. ಮಗುವನ್ನು ಕಳೆದುಕೊಂಡು ನಡು ರಸ್ತೆಯಲ್ಲೇ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. : - – - – . ..