ಬಾಗಲಕೋಟೆ: ರಾಜ್ಯದ ವುಶು ಸ್ಪೋರ್ಟ್ಸ್‌ ಸಾಧಕರಿಗೆ ಬೇಕಿದೆ ಸರ್ಕಾರದ ನೆರವು..! ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವುಶು ಸ್ಪೋರ್ಟ್ಸ್‌ನಲ್ಲಿ ಸಾಧನೆ ಮಾಡಿ ಸೈ ಎನಿಸಿಕೊಂಡಿರೋ ಬಾಗಲಕೋಟೆ ಸಾಧಕರು ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ ಬಾಗಲಕೋಟೆ(ಜು.29):ಕ್ರೀಡೆ ಅಂದ್ರೆ ಸಾಕು ಪ್ರಾಚೀನ ಕಾಲದಿಂದಲೂ ಅದಕ್ಕೆ ಅದರದೇ ಆದ ಮಹತ್ವವಿದ್ದು, ಅದ್ರಲ್ಲೂ ಇತ್ತೀಚಿನ ದಿನಗಳಲ್ಲಂತೂ ಕ್ರೀಡೆಗೆ ಇನ್ನಿಲ್ಲದ ಮಹತ್ವ ಬಂದಿದ್ದು, ಆಯಾ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರು ಅದರಿಂದಲೇ ಬದುಕು ಕಂಡುಕೊಂಡ ಉದಾಹರಣೆಗಳಿವೆ. ಆದ್ರೆ ವುಶು ಕ್ರೀಡೆಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮಾತ್ರ ಸರ್ಕಾರ ಕಣ್ತೆರೆದು ನೋಡ್ತಿಲ್ಲ. ಇವುಗಳ ಮಧ್ಯೆ ವುಶು ಸಾಧಕರ ಸಾಧನೆ ಮಾತ್ರ ನಿಂತಿಲ್ಲ. ಹಾಗಾದ್ರೆ ವುಶು ಕ್ರೀಡೆಯಲ್ಲಿ ಆಗ್ತಿರೋ ಸಾಧನೆ ಏನು? ಸಾಧಕರಿಗೆ ಸರ್ಕಾರ ಮಾಡಬೇಕಾದದ್ದು ಏನು ಎಂಬುದರ ಕುರಿತ ವರದಿ ಇಲ್ಲಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಹೊತ್ತು ವುಶು ಕಲೆಯನ್ನ ಮಕ್ಕಳಿಗೆ ಹೇಳಿಕೊಡುವ ಕೋಚ್​​, ಕೋಚ್​ ಅಣತಿಯಂತೆ ಶಿಸ್ತುಬದ್ಧತೆಯಿಂದ ವುಶು ಕ್ರೀಡೆ ಕಲಿಕಾಭ್ಯಾಸದಲ್ಲಿ ಇರುವ ಮಕ್ಕಳು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದು ತಮ್ಮ ಮೆಡಲ್​ಗಳೊಂದಿಗೆ ಹೆಮ್ಮೆ ಪಡುವಂತೆ ಮಾಡಿರುವ ಸಾಧಕರು, ಅಂದಹಾಗೆ ಇಂತಹ ಸಾಧಕರು ಕಂಡು ಬಂದಿದ್ದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ. ಹೌದು. ವುಶು ಕಲೆ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಮಹತ್ವಪಡೆದುಕೊಂಡಿದ್ದು, ವುಶು ಮಾರ್ಷಲ್ ಆರ್ಟನ ಹೆಡ್​ ಕ್ವಾಟರ್​ ಬಾಗಲಕೋಟೆಯಲ್ಲಿದ್ದು, ನಿತ್ಯ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಅನೇಕ ವಿದ್ಯಾರ್ಥಿಗಳು ಇಲ್ಲಿ ವುಶು ಕ್ರೀಡಾ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇಲ್ಲಿನ ರಾಷ್ಟ್ರೀಯ ಕೋಚ್​ ಆಗಿರೋ ಸಂಗಮೇಶ ಲಾಯದಗುಂದಿ ಅವರು ವಿದ್ಯಾರ್ಥಿಗಳಿಗೆ ನಿತ್ಯ ಕೋಚ್​ ನೀಡಿ ಪರಿಣಿತರನ್ನಾಗಿಸುತ್ತಿದ್ದಾರೆ. : ಪವನ್ ಶೆರಾವತ್ ಅವರನ್ನು ಕೈಬಿಟ್ಟ ಬೆಂಗಳೂರು ಬುಲ್ಸ್..! ರಾಷ್ಟ್ರ & ಅಂತಾರಾಷ್ಟ್ರೀಯ ಮಟ್ಟದಲ್ಲಿ ವುಶು ಕ್ರೀಡೆಯಲ್ಲಿ ಬಾಗಲಕೋಟೆ ಸಾಧಕರು ಇನ್ನು ಬಾಗಲಕೋಟೆಯಿಂದ ಅನೇಕ ವುಶು ಕ್ರೀಡಾಳುಗಳು ಬೇರೆ ಬೇರೆ ದೇಶಗಳಿಗೆ ತೆರಳಿ ಸಾಧನೆ ಮಾಡಿದ ಉದಾಹರಣಗೆಳಿವೆ. ಮುಖ್ಯವಾಗಿ ರಷ್ಯಾ, ಚೀನಾ, ಜಕಾರ್ತ, ನೇಪಾಳ, ಮಲೇಶಿಯಾದಲ್ಲಿ ಬಾಗಲಕೋಟೆಯಿಂದ ಅದೆಷ್ಟೋ ವಿದ್ಯಾರ್ಥಿಗಳು ಹೋಗಿ ಸ್ಪರ್ಧಿಸಿ ಸಾಧನೆ ಮಾಡಿದ್ದಾರೆ. 2022 ಫೆ. ರಷ್ಯಾದ ಮಾಸ್ಕೋ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತದ ಪ್ರತಿನಿಧಿಯಾಗಿದ್ದ ಸಂಗಮೇಶ ಲಾಯದಗುಂದಿ ಅವರು ಎರಡು ವೈಯಕ್ತಿಕ ವಿಭಾಗದಲ್ಲಿ ಎರಡು ಬೆಳ್ಳಿ ಪದಕ ಪಡೆದರೆ, ಗಣೇಶ ನಾಗರೇಶಿ ಎಂಬಾತ ಎರಡು ವಿಭಾಗದಲ್ಲಿ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾರೆ. ಇವುಗಳ ಮಧ್ಯೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಮಿನಿ ಓಲಂಪಿಕ್​ ಕ್ರೀಡಾಕೂಟನಲ್ಲಿ 25ರಲ್ಲಿ 15 ಗೋಲ್ಡ್ ಮೆಡಲ್​ಗಳನ್ನ ಪಡೆದುಕೊಂಡು ಟೀಮ್​ ಚಾಂಪಿಯನ್​ ಪಡೆದ ಕೀರ್ತಿ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿಗಳು ಪಡೆದುಕೊಂಡು ಬಂದಿದ್ದಾರೆ, ಅಲ್ಲದೆ ಹಿಮಾಚಲ ಪ್ರದೇಶದ ಮಂಡಿ ಎಂಬಲ್ಲಿ ಸಬ್​ ಜ್ಯೂನಿಯರ್ ನ್ಯಾಷನಲ್​​ ಚಾಂಪಿಯನ್​ ನಡೆಯಿತು, ಇದರಲ್ಲಿ ವಿವಿಧ ರಾಜ್ಯಗಳ ಸ್ಪರ್ಧಿಗಳ ಜೊತೆ ಭಾಗವಹಿಸಿ ಅಮೋಘ ಪ್ರದರ್ಶನ ನೀಡಿ ಬಾಗಲಕೋಟೆಯ ಸಂಜನಾ ಅಂಬೋರೆ ಗೋಲ್ಡ್​ ಮೆಡಲ್​ ಪಡೆದು ಸಾಧನೆ ಮಾಡಿದ್ದಾಳೆ. ಹೀಗೆ ವುಶು ಸ್ಪರ್ಧೆಯಲ್ಲಿ ಭಾಗವಹಿಸಿ ಗೋಲ್ಡ್​ ಮೆಡಲ್​ ಪಡೆದು ಸಾಧಕರು ಇಂದು ನಾವೆಲ್ಲಾ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ ಎಂದು ಹೇಳುತ್ತಾರೆ ಬಾಗಲಕೋಟೆ ಮೂಲದ ವುಶು ಕ್ರೀಡೆಯ ನ್ಯಾಷನಲ್​ ಕೋಚ್​ ಸಂಗಮೇಶ. ಯೂಟೂಬ್​ ನೋಡಿ ವುಶು ಮೇಲೆ ಆಸಕ್ತಿ, ಗೋಲ್ಡ್​ ಮೆಡಲ್ ಪಡೆದು ಬಾಲಕಿ ಹೌದು, ಕೊರೋನಾ ಸಮಯದಲ್ಲಿ ಬಹುತೇಕರು ಮನೆಯಲ್ಲಿದ್ದೇ ಹಲವು ಅಭಿರುಚಿ ಗೀಳು ಹಚ್ಚಿಕೊಂಡಿದ್ದನ್ನು ನೋಡಿದಿವಿ, ಆದರೆ ಬಾಗಲಕೋಟೆಯ ವಿದ್ಯಾರ್ಥಿನಿ ಸಂಜನಾ ಅಂಬೋರೆ ಮೊಬೈಲ್​ನಲ್ಲಿ ಯೂಟೂಬ್​ನಲ್ಲಿ ವುಶು ಕ್ರೀಡೆಯನ್ನ ಗಮನಿಸಿದ್ದಾಳೆ. ಬಳಿಕ ಅದರಂತೆ ಮನೆಯಲ್ಲಿದ್ದೇ ಕಲಿಕೆಗೆ ಮುಂದಾಗಿದ್ದಾಳೆ, ಬಳಿಕ ವುಶು ಕೋಚ್​ ಸಂಗಮೇಶ ಅವರ ಬಳಿ ಬಂದು ಕಲಿಕೆಗೆ ಮುಂದಾಗಿದ್ದಾಳೆ. ಹೀಗೆ ಶಿಸ್ತು ಸಂಯಮದಿಂದ ವುಶು ಸ್ಪರ್ಧೆಯಲ್ಲಿ ವಿವಿಧ ಭಂಗಿಗಳನ್ನ ಕಷ್ಟಪಟ್ಟು ಕಲಿತು ಹಿಮಾಚಲ ಪ್ರದೇಶದ ಮಂಡಿ ಎಂಬಲ್ಲಿ ನಡೆದ ಸಬ್ ಜ್ಯೂನಿಯರ್​ ನ್ಯಾಷನಲ್ ಚಾಂಪಿಯನ್​ಶಿಪ್​ನಲ್ಲಿ ಗೋಲ್ಡ್​ ಮೆಡಲ್​ ಪಡೆದು ಸೈ ಎನಿಸಿಕೊಂಡಿದ್ದು, ವುಶು ಕ್ರೀಡೆಯ ಸಾಧನೆಗೆ ಖುಷಿಯಾಗಿದೆ, ನಮ್ಮ ಕೋಚ್​ ಸಂಗಮೇಶ ಸರ್ ಮತ್ತು ತಂದೆ ಸುನೀಲ್​, ತಾಯಿ ಸೋನಾಲಿ ಅವರ ಪ್ರೇರಣೆಯಿಂದ ತಾನು ಗೋಲ್ಡ್​ ಮೆಡಲ್ ಪಡೆಯಲು ಸಾಧ್ಯವಾಯಿತೆಂದು ಸಂಜನಾ ಅಂಬೋರೆ ಅಭಿಪ್ರಾಯಪಟ್ಟಿದ್ದಾಳೆ. ವುಶು ಕ್ರೀಡೆಯ ನೆರವಿಗೆ ನಿಂತ ಶಾಸಕ ಚರಂತಿಮಠ ಇನ್ನು ಕರ್ನಾಟಕ ರಾಜ್ಯ ವುಶು ಸಂಸ್ಥೆಯ ಅಧ್ಯಕ್ಷರಾಗಿರೋ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ವುಶು ಕಲಿಕೆಗಾಗಿ ತಮ್ಮ ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಬಸವೇಶ್ವರ ಸಂಸ್ಥೆಯ ಕಟ್ಟಡದಲ್ಲಿ ಅವಕಾಶ ಮಾಡಿಕೊಡುವುದು ಸೇರಿದಂತೆ ವಿವಿಧ ಸೌಲಭ್ಯಗಳನ್ನ ಮಾಡಿಕೊಟ್ಟಿದ್ದಾರೆ. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶೋಕ ಡಿ. ಮೊಖಾಸಿ ಸೇರಿದಂತೆ ಸಂಸ್ಥೆಯ ಹಲವು ಪದಾಧಿಕಾರಿಳ ಒಗ್ಗಟ್ಟಿನಿಂದ ವಿವಿಧ ಹಂತದ ವುಶು ಕ್ರೀಡೆಗಳನ್ನೂ ಸಹ ಆಯೋಜಿಸಿ ವುಶು ಕ್ರೀಡೆ ಉತ್ತೇಜಿಸಲು ಸಾಧ್ಯವಾಗಿದೆ. ಕ್ರೀಡೆಯಲ್ಲಿ ಸೋಲು ಎನ್ನುವುದಿಲ್ಲ: ಪ್ರಧಾನಿ ಮೋದಿ ವುಶು ಕ್ರೀಡಾ ಸಾಧಕರಿಗೆ ಬೇಕಿದೆ ಸರ್ಕಾರದ ನೆರವು ಈ ಮಧ್ಯೆ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕದಲ್ಲಿ ಸರ್ಕಾರದಿಂದ ವುಶು ಕ್ರೀಡೆಗೆ ಹೆಚ್ಚಿನ ಪ್ರಾದಾನ್ಯತೆ ಸಿಗ್ತಿಲ್ಲ ಎನ್ನುವ ಕೂಗು ಕೇಳಿ ಬರ್ತಿದೆ. ಯಾಕೆಂದ್ರೆ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾ ಸಾಧಕರಿಗೆ ಕೆಲವು ಇಲಾಖೆಗಳಲ್ಲಿ ಸ್ಪೋರ್ಟ್ಸ ಕೋಟಾದಡಿ ನೌಕರಿ ಸಿಗುತ್ತಿದ್ದು, ಆದ್ರೆ ವುಶು ಕ್ರೀಡೆಯಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ರೂ ಅನುಕೂಲತೆ ಸಿಗ್ತಿಲ್ಲ, ಮೇಲಾಗಿ ಸ್ಕಾಲರಶಿಪ್​ ಸಹ ಎಲ್ಲರಿಗೂ ಸಮನಾಗಿ ಸಿಗ್ತಿಲ್ಲ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸಿ ವುಶು ಕ್ರೀಡೆಯಲ್ಲಿ ಸಾಧನೆ ಮಾಡಿದವರನ್ನೂ ಸಹ ಪೋಲಿಸ ಇಲಾಖೆ, ಕ್ರೀಡಾ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಗಳಲ್ಲಿ ನೌಕರಿಗೆ ಪಡೆಯುವಂತಾಗಲಿ ಎಂದು ವುಶು ಸಾಧಕ ಪವನ್​ಕುಮಾರ ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ವಿವಿಧ ಕ್ರೀಡೆಗಳಿಗೆ ಸಿಗುತ್ತಿರುವಂತಹ ಮನ್ನಣೆ ವುಶು ಕ್ರೀಡೆಗೆ ಸಿಗ್ತಿಲ್ಲ ಎನ್ನುವ ಕೊರಗು ಇದೀಗ ವುಶು ಸಾಧಕರಲ್ಲಿ ಕೇಳಿ ಬರುತ್ತಿದ್ದು, ಇದಕ್ಕೆ ಸರ್ಕಾರ ಮುಂದಿನ ದಿನಮಾನಗಳಲ್ಲಿ ಯಾವ ರೀತಿ ಸ್ಪಂದಿಸುತ್ತೇ ಅಂತ ಕಾದು ನೋಡಬೇಕಿದೆ.