: 100 ಮೀಟರ್ ಓಟದಲ್ಲಿ ಚಿನ್ನ ಗೆದ್ದ 94 ವರ್ಷದ ಭಗ್ವಾನಿ ದೇವಿ..! * ವರ್ಲ್ಡ್‌ ಮಾಸ್ಟರ್ಸ್ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ 94 ವರ್ಷದ ಸಾಧಕಿ* 94 ವರ್ಷದ ಭಗ್ವಾನಿ ದೇವಿ ದಾಗರ್ ಸಾಧನೆಗೆ ಹರಿದು ಬಂತು ಅಭಿನಂದನೆಗಳ ಮಹಾಪೂರ* 100 ಮೀಟರ್ ಓಟದ ಸ್ಪರ್ಧೆಯನ್ನು ಕೇವಲ 24.74 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ ಭಗ್ವಾನಿ ಫಿನ್ಲೆಂಡ್(ಜು.13): ಸಾಧಿಸುವ ಛಲವಿದ್ದರೇ, ದೇಹವೂ ಸ್ಪಂದಿಸಿದರೇ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು 94 ವರ್ಷದ ಭಗ್ವಾನಿ ದೇವಿ ಎನ್ನುವ ಹಿರಿಯ ಅಥ್ಲೀಟ್ ಸಾಬೀತುಪಡಿಸಿದ್ದಾರೆ. ಇಲ್ಲಿನ ತಾಂಪೆರೆಯಲ್ಲಿ ಜೂನ್ 29ರಿಂದ ಜುಲೈ 10ರವರೆಗೆ ನಡೆದ ವರ್ಲ್ಡ್‌ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 94 ವರ್ಷದ ಭಗ್ವಾನಿ ದೇವಿ ದಾಗರ್, 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಭಗ್ವಾನಿ ದೇವಿ ದಾಗರ್ 100 ಮೀಟರ್ ಓಟದ ಸ್ಪರ್ಧೆಯನ್ನು ಕೇವಲ 24.74 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ್ದಾರೆ. ಇದಷ್ಟೇ ಅಲ್ಲದೇ ಭಗ್ವಾನಿ ದೇವಿ, ಶಾಟ್‌ಫುಟ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ನಾನು ಪದಕ ಗೆದ್ದಿದ್ದಕ್ಕೆ ತುಂಬಾನೆ ಸಂತೋಷವಾಗುತ್ತಿದೆ. ಮತ್ತೊಂದು ದೇಶದಲ್ಲಿ ನಮ್ಮ ದೇಶಕ್ಕಾಗಿ ಪದಕ ಗೆಲ್ಲುವುದು ನನಗೆ ಹೆಮ್ಮೆ ಮೂಡಿಸಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ಜತೆ ಭಗ್ವಾನಿ ದೇವಿ ಸಂತೋಷ ವ್ಯಕ್ತಪಡಿಸಿದ್ದಾರೆ. ಟ್ರ್ಯಾಕ್‌ ಹಾಗೂ ಫೀಲ್ಡ್ ವಿಭಾಗದ ವರ್ಲ್ಡ್‌ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಕ್ರೀಡಾಕೂಟವು 35 ವರ್ಷ ಮೇಲ್ಪಟ್ಟವರಿಗಾಗಿ ಆಯೋಜಿಸಲಾಗಿದೆ.. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡಾ ಟ್ವೀಟ್ ಮೂಲಕ ಭಗ್ವಾನಿ ದೇವಿ ದಾಗರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಇದು ಸ್ಪೂರ್ತಿದಾಯಕ. 94ನೇ ವಯಸ್ಸಿನಲ್ಲಿ ಭಗ್ವಾನಿ ದೇವಿಯವರು 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಎರಡು ಕಂಚಿನ ಪದಕಗಳನ್ನು ಫಿನ್ಲೆಂಡ್‌ನಲ್ಲಿ ನಡೆದ ವರ್ಲ್ಡ್‌ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಯಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಆರ್ಚರಿ ವಿಶ್ವ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಅಭಿಷೇಕ್‌ ವರ್ಮಾ-ಜ್ಯೋತಿ ಸುರೇಖಾ ಕೇಂದ್ರ ವಾಣಿಜ್ಯ ಸಚಿವ ಪೀಯೂಸ್ ಗೋಯೆಲ್ ಟ್ವೀಟ್ ಮಾಡಿ, ಭಗ್ವಾನಿ ದೇವಿ ದಾಗರ್ ಅವರೇ ನಾವೆಲ್ಲರೂ ನಿಮ್ಮ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತಿದ್ದೇವೆ. ಫಿನ್ಲೆಂಡ್‌ನಲ್ಲಿ ನಡೆದ ವರ್ಲ್ಡ್‌ ಮಾಸ್ಟರ್ಸ್ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಒಂದು ಚಿನ್ನ ಹಾಗೂ ಎರಡು ಕಂಚಿನ ಪದಕ ಜಯಿಸಿದ್ದಾರೆ. 94ನೇ ವಯಸ್ಸಿನಲ್ಲಿ ಎಂತಹ ಅದ್ಭುತ ಸಾಧನೆಯಿದು ಎಂದು ಗೋಯೆಲ್ ಟ್ವೀಟ್ ಮಾಡಿದ್ದಾರೆ. ಡೆಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್‌ ಮಾಡಿ ಭಗ್ವಾನಿ ದೇವಿ ಅವರ ಸಾಧನೆ ನಮ್ಮೆಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ತಮ್ಮ 94ನೇ ವಯಸ್ಸಿನಲ್ಲಿ ವರ್ಲ್ಡ್ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತೀಯರಲ್ಲಿ ಸಂತಸದ ಚಿಲುಮೆ ಹರಿಯುವಂತೆ ಮಾಡಿದ ಭಗ್ವಾನಿ ದೇವಿ ಅವರಿಗೆ ಅಭಿನಂದನೆಗಳು. ಅವರ ಉತ್ಸಾಹ ಹಾಗೂ ಶಕ್ತಿ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾದದ್ದು, ಭಾರತೀಯರಾಗಿ ನಾವೆಲ್ಲರೂ ನಿಮ್ಮ ಸಾಧನೆಯನ್ನು ಹೆಮ್ಮೆ ಪಡುತ್ತೇವೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಇನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡಾ ಟ್ವೀಟ್ ಮಾಡಿ ಭಗ್ವಾನಿ ದೇವಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸಾಧನೆಗೆ ವಯಸ್ಸು ಅಡ್ಡಿಯಲ್ಲ, ತುಂಬಾ ಸ್ಪೂರ್ತಿದಾಯಕವಾದದ್ದು ಎಂದು ಠಾಕೂರ್ ಟ್ವೀಟ್ ಮಾಡಿದ್ದಾರೆ.