ಮಳೆಯಿಂದ ಟಿ20 ಪಂದ್ಯ ರದ್ದು, ಬಿಸಿಸಿಐ ವಿರುದ್ದ ಅಸಮಾಧಾನ ಹೊರಹಾಕಿದ ಫ್ಯಾನ್ಸ್‌..! * ಮಳೆಗೆ ಆಹುತಿಯಾದ ಭಾರತ-ದಕ್ಷಿಣ ಆಫ್ರಿಕಾ 5ನೇ ಟಿ20 ಪಂದ್ಯ* ನಿರ್ಣಾಯಕ ಟಿ20 ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ* ಜೂನ್ ತಿಂಗಳಿನಲ್ಲಿ ಪಂದ್ಯ ಆಯೋಜಿಸಿದ್ದಕ್ಕೆ ಬೇಸರ ಹೊರಹಾಕಿದ ಕ್ರಿಕೆಟ್ ಫ್ಯಾನ್ಸ್‌ ಬೆಂಗಳೂರು(ಜೂ.20):ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ( ) ತಂಡಗಳ ನಡುವಿನ ಐದನೇ ಹಾಗೂ ನಿರ್ಣಾಯಕ ಟಿ20 ಪಂದ್ಯವು ಮಳೆರಾಯನ ಅಡಚಣೆಯಿಂದಾಗಿ ರದ್ದಾಗಿದೆ. ಜೂನ್ 19ರಂದು ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ( ) ಆಯೋಜನೆಗೊಂಡಿದ್ದ ಪಂದ್ಯವು ವರುಣನ ಅವಕೃಪೆಗೆ ಒಳಗಾಯಿತು. ಇದೀಗ ಬೆಂಗಳೂರಿನಲ್ಲಿ ಜೂನ್ ತಿಂಗಳಿನಲ್ಲಿ ಬಿಸಿಸಿಐ () ಪಂದ್ಯ ಆಯೋಜಿಸಿದ್ದಕ್ಕೆ ಕ್ರಿಕೆಟ್‌ ಅಭಿಮಾನಿಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು ಜಯ ದಾಖಲಿಸಿತ್ತು. ನವದೆಹಲಿ ಹಾಗೂ ಕಟಕ್‌ನಲ್ಲಿ ನಡೆದಿದ್ದ ಸರಣಿಯ ಆರಂಭಿಕ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವು ಗೆಲುವು ಸಾಧಿಸಿತ್ತು. ಇದಾದ ಬಳಿಕ ವಿಶಾಖಪಟ್ಟಣಂ, ರಾಜ್‌ಕೋಟ್‌ನಲ್ಲಿ ನಡೆದಿದ್ದ ಪಂದ್ಯಗಳನ್ನು ಗೆದ್ದ ರಿಷಭ್ ಪಂತ್ ಪಡೆ 2-2 ಅಂತರದಲ್ಲಿ ಸರಣಿ ಸಮಬಲ ಸಾಧಿಸಿತ್ತು. ಹೀಗಾಗಿ ಬೆಂಗಳೂರಿನ ಪಂದ್ಯ ಫೈನಲ್ ಎನಿಸಿಕೊಂಡಿತ್ತು. ನಿರ್ಣಾಯಕ ಪಂದ್ಯದ ಮೇಲೆ ವರುಣ ತಣ್ಣೀರೆರಚಿತು. ಮೊದಲಿಗೆ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಮಾಡಲು ತೀರ್ಮಾನಿಸಿತು. ಭಾರತ ಬ್ಯಾಟಿಂಗ್‌ಗೆ ಆಗಮಿಸಿದಾಗ ಮಳೆ ಅಡ್ಡಿಪಡಿಸಿತು. 15 ನಿಮಿಷಗಳ ಕಾಲ ಸುರಿದ ಮಳೆಯಿಂದಾಗಿ 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ 7.50ಕ್ಕೆ ಆರಂಭವಾಯಿತು. ಪಂದ್ಯವನ್ನು ತಲಾ 19 ಓವರ್‌ಗೆ ಇಳಿಸಲಾಯಿತು. ಆದರೆ 3.3 ಓವರ್‌ನಲ್ಲಿ ಟೀಂ ಇಂಡಿಯಾ ( ) 2 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿದ್ದಾಗ ಮತ್ತೆ ಮಳೆ ಅಡ್ಡಿ ಪಡಿಸಿತು. ಇದಾದ ಬಳಿಕ 9.35ಕ್ಕೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ನಿರ್ಣಾಯಕ ಪಂದ್ಯವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದಕ್ಕೆ ಬಿಸಿಸಿಐ ಅಸಮಾಧಾನ ಹೊರಹಾಕಿದ್ದಾರೆ. ಬರೋಬ್ಬರಿ ಮೂರು ವರ್ಷಗಳ ಬೆಂಗಳೂರಿನಲ್ಲಿ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಕಣ್ತುಂಬಿಕೊಳ್ಳಲು ಮೈದಾನಕ್ಕೆ ಆಗಮಿಸಿದ್ದ ಬೇಸರದ ಮುಖ ಹೊತ್ತು ತಮ್ಮ ತಮ್ಮ ಮನೆಗೆ ವಾಪಾಸ್ಸಾದರು. ಇದರ ಜತೆಗೆ ಜೂನ್ ತಿಂಗಳಿನಲ್ಲಿ ಮಹತ್ವದ ಟಿ20 ಪಂದ್ಯವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಬೇಸರ ಹೊರಹಾಕಿದ್ದಾರೆ. ಬೆಂಗಳೂರು ಪಂದ್ಯದ ಟಿಕೆಟ್ ಹಣ 50% ವಾಪಾಸ್ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5ನೇ ಹಾಗೂ ನಿರ್ಣಾಯಕ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದರಿಂದಾಗಿ ಪ್ರೇಕ್ಷಕರಿಗೆ ಟಿಕೆಟ್ ಹಣದ ಶೇ.50ರಷ್ಟು ವಾಪಾಸ್ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತೀರ್ಮಾನಿಸಿದೆ. ಪಂದ್ಯದ ಬಳಿಕ ಈ ಕುರಿತಂತೆ ಮಾಹಿತಿ ನೀಡಿದ ಕೆಎಸ್‌ಸಿಎ ಅಧಿಕಾರಿಗಳು 'ಸಾಮಾನ್ಯವಾಗಿ ಯಾವುದೇ ಪಂದ್ಯದಲ್ಲಿ ಒಂದು ಬಾಲ್ ಎಸೆದಿದ್ದರೂ ಟಿಕೆಟ್ ಹಣ ಪ್ರೇಕ್ಷಕರಿಗೆ ಹಿಂದಕ್ಕೆ ಕೊಡುವುದಿಲ್ಲ. ಆದರೆ ಬೆಂಗಳೂರಿನ ಕ್ರೀಡಾಭಿಮಾನಿಗಳಿಗೆ ಮಳೆಯಿಂದಾಗಿ ಈ ಪಂದ್ಯ ನಡೆಯದೇ ನಿರಾಸೆಯಾಗಿದೆ. ಹೀಗಾಗಿ ಪಂದ್ಯದ ಟಿಕೆಟ್ ಹಣದ ಅರ್ಧವನ್ನು ಹಿಂದಕ್ಕೆ ನೀಡುತ್ತೇವೆ. ಇದರ ಬಗ್ಗೆ ನಾವು ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಮಾಹಿತಿ ಒದಗಿಸುತ್ತೇವೆ ಎಂದು ತಿಳಿಸಿದ್ದಾರೆ.