ಇಂದು ರೈಡ​ರ್ಸ್‌ ರಾಯಲ್ಸ್‌ ಹಣಾಹಣಿ : ಗೆಲುವಿನ ಲಯಕ್ಕೆ ಬರುತ್ತಾ ರಾಜಸ್ಥಾನ? ಮುಂಬೈ: 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಸತತ 2 ಸೋಲುಗಳಿಂದ ಕಂಗೆಟ್ಟಿರುವ ಕಳೆದ ಬಾರಿ ರನ್ನರ್‌-ಅಪ್‌ ಕೋಲ್ಕತಾ ನೈಟ್‌ ರೈಡ​ರ್ಸ್‌ ಗೆಲುವಿನ ಹಳಿಗೆ ಮರಳಲು ಕಾತರಿಸುತ್ತಿದ್ದು, ಸೋಮವಾರ ರಾಜಸ್ಥಾನ ರಾಯಲ್ಸ್‌ ( ) ವಿರುದ್ಧ ಸೆಣಸಾಡಲಿದೆ. ರಾಯಲ್ಸ್‌ ಕೂಡಾ ಕಳೆದ ಪಂದ್ಯದಲ್ಲಿ ಸೋತಿದ್ದು, ಗೆಲುವಿಗಾಗಿ ಹಾತೊರೆಯುತ್ತಿದೆ. ಕೆಕೆಆರ್‌ () ಈವರೆಗೆ ಆಡಿರುವ 6 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದ್ದು, ಮೂರರಲ್ಲಿ ಪರಾಭವಗೊಂಡಿದೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈಗೆ () ಸೋಲುಣಿಸಿದ ತಂಡ, ಆರ್‌ಸಿಬಿ ವಿರುದ್ಧ ಸೋತಿತ್ತು. ಬಳಿಕ ಮುಂಬೈ ಇಂಡಿಯನ್ಸ್‌ ( ) ಹಾಗೂ ಪಂಜಾಬ್‌ ಕಿಂಗ್ಸ್‌ ( ) ವಿರುದ್ಧ ಗೆಲುವು ಸಾಧಿಸಿದ ತಂಡ, ನಂತರ ಡೆಲ್ಲಿ () ಹಾಗೂ ಹೈದರಾಬಾದ್‌ () ವಿರುದ್ಧ ಸೋಲುಂಡಿದೆ. ನಾಯಕ ಶ್ರೇಯಸ್‌ ಅಯ್ಯರ್‌, ನಿತೀಶ್‌ ರಾಣಾ ಲಯ ಮುಂದುವರಿಸಲು ಎದುರು ನೋಡುತ್ತಿದ್ದು, ವೆಂಕಟೇಶ್‌ ಅಯ್ಯರ್‌ ( ), ಆ್ಯರೋನ್‌ ಫಿಂಚ್‌ ( ) ಅಬ್ಬರಿಸಬೇಕಿದೆ. ಆ್ಯಂಡ್ರೆ ರಸೆಲ್‌ ( ) ಮಾತ್ರ ತಂಡದ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಪ್ಯಾಟ್‌ ಕಮಿನ್ಸ್‌ ಮತ್ತೊಂದು ಸ್ಫೋಟಕ ಆಟದ ನಿರೀಕ್ಷೆಯಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಉಮೇಶ್‌ ಯಾದವ್‌ ಅಭೂತಪೂರ್ವ ಲಯದಲ್ಲಿದ್ದು, 6 ಪಂದ್ಯಗಳಲ್ಲಿ 10 ವಿಕೆಟ್‌ ಎಗರಿಸಿದ್ದಾರೆ. ಸುನಿಲ್‌ ನರೈನ್‌ ( ) ಬೌಲಿಂಗ್‌ ಮೊನಚು ಕಳೆದುಕೊಂಡಿದ್ದು, ವರುಣ್‌ ಚಕ್ರವರ್ತಿ ವಿಕೆಟ್‌ ಪಡೆಯಲು ವಿಫಲರಾಗುತ್ತಿದ್ದಾರೆ. ಎಲ್ಲಾ ವಿಭಾಗದಲ್ಲೂ ಸುಧಾರಿತ ಪ್ರದರ್ಶನ ನೀಡಿದರೆ ಮಾತ್ರ ತಂಡಕ್ಕೆ ಗೆಲುವು ದಕ್ಕಲಿದೆ. ಮತ್ತೊಂದೆಡೆ, ರಾಜಸ್ಥಾನ ಆಡಿರುವ 5 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿ, 2ರಲ್ಲಿ ಸೋತಿದೆ. ಬ್ಯಾಟಿಂಗ್‌ನಲ್ಲಿ ಜೋಸ್‌ ಬಟ್ಲರ್‌ ಅಬ್ಬರಿಸುತ್ತಿದ್ದರೆ, ಬೌಲಿಂಗ್‌ನಲ್ಲಿ ಯಜುವೇಂದ್ರ ಚಹಲ್‌ ( ) ತಂಡದ ಆಧಾರಸ್ತಂಭ. ಅವರು ಆಡಿರುವ 5 ಪಂದ್ಯಗಳಲ್ಲಿ 12 ವಿಕೆಟ್‌ ಪಡೆದಿದ್ದಾರೆ. ಶಿಮ್ರೋನ್‌ ಹೆಟ್ಮೇಯರ್‌ ( ) ಮಿಂಚುತ್ತಿದ್ದರೂ, ನಾಯಕ ಸಂಜು ಸ್ಯಾಮ್ಸನ್‌ ( ), ದೇವದತ್ತ ಪಡಿಕ್ಕಲ್‌ ( ) ಬ್ಯಾಟ್‌ನಿಂದ ರನ್‌ ಸಿಡಿಯುತ್ತಿಲ್ಲ. ವಾನ್‌ ಡೆರ್‌ ಡುಸ್ಸೆನ್‌, ರಿಯಾನ್‌ ಪರಾಗ್‌ ಜವಾಬ್ದಾರಿ ಅರಿತು ಆಡಬೇಕಿದೆ. ಪ್ರಸಿದ್‌ ಕೃಷ್ಣ, ಆರ್‌.ಅಶ್ವಿನ್‌, ಜೇಮ್ಸ್‌ ನೀಶಮ್‌, ಕುಲ್ದೀಪ್‌ ಸೆನ್‌ ಕೆಕೆಆರ್‌ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಿದೆ. ಸಂಭವನೀಯ ಆಟಗಾರರ ಪಟ್ಟಿ ರಾಜಸ್ಥಾನ: ಬಟ್ಲರ್‌, ಪಡಿಕ್ಕಲ್‌, ಸ್ಯಾಮ್ಸನ್‌(ನಾಯಕ), ಡುಸ್ಸೆನ್‌, ಹೆಟ್ಮೇಯರ್‌, ಅಶ್ವಿನ್‌, ರಿಯಾನ್‌, ನೀಶಮ್‌, ಚಹಲ್‌, ಕುಲ್ದೀಪ್‌ ಸೆನ್‌, ಪ್ರಸಿದ್‌ ಕೃಷ್ಣ. ಕೆಕೆಆರ್‌: ವೆಂಕಿ ಅಯ್ಯರ್‌, ಫಿಂಚ್‌, ಶ್ರೇಯಸ್‌(ನಾಯಕ), ನಿತೀಶ್‌, ರಸೆಲ್‌, ಜಾಕ್ಸನ್‌, ಸುನಿಲ್‌ ನರೈನ್‌, ಕಮಿನ್ಸ್‌, ಉಮೇಶ್‌, ಅಮಾನ್‌, ಚಕ್ರವರ್ತಿ ಮುಖಾಮುಖಿ: 24 ರಾಜಸ್ಥಾನ: 11 ಕೆಕೆಆರ್‌: 13 ಸ್ಥಳ: ಮುಂಬೈ, ಬ್ರೆಬೋರ್ನ್‌ ಕ್ರೀಡಾಂಗಣ, ಪಂದ್ಯ: ಸಂಜೆ 7.30ಕ್ಕೆ, ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌