2022 ಸೂರ್ಯಕುಮಾರ್ ಯಾದವ್ ಅರ್ಧಶತಕ, ಕೆಕೆಆರ್ ಗೆ ಸವಾಲಿನ ಗುರಿ ನೀಡಿದ ಮುಂಬೈ ಮೊದಲ 11 ಓವರ್ ಗಳ ಆಟದಲ್ಲಿ ಕೇವಲ 55 ರನ್ ಬಾರಿಸಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ, ಸೂರ್ಯಕುಮಾರ್ ಯಾದವ್ 34 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕೆಕೆಆರ್ ತಂಡಕ್ಕೆ 162 ರನ್ ಗಳ ಸವಾಲಿನ ಗುರಿ ನೀಡುವಲ್ಲಿ ನೆರವಾದರು. ಪುಣೆ (ಏ. 6):ಗಾಯದಿಂದ ಚೇತರಿಸಿಕೊಂಡು ಹಾಲಿ ಆವೃತ್ತಿಯ ಐಪಿಎಲ್ ನಲ್ಲಿ ( 2022) ತನ್ನ ಮೊದಲ ಪಂದ್ಯವಾಡಿದ ಸೂರ್ಯಕುಮಾರ್ ಯಾದವ್ ( ) ಬಾರಿಸಿದ ಸ್ಪೋಟಕ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ( )ತಂಡ, ಕೋಲ್ಕತ ನೈಟ್ ರೈಡರ್ಸ್ ( ) ತಂಡದ ಗೆಲುವಿಗೆ ಸವಾಲಿನ ಗುರಿ ನೀಡಿದೆ. ಐಪಿಎಲ್ ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಮುಂಬೈ ಹ್ಯಾಟ್ರಿಕ್ ಸೋಲನ್ನು ತಪ್ಪಿಸಿಕೊಳ್ಳುವ ಗುರಿಯಲ್ಲಿದೆ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮ ( ) ನೇತೃತ್ವದ ಮುಂಬೈ ಇಂಡಿಯನ್ಸ್. 11 ಓವರ್ ಗಳಲ್ಲಿ 55 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಈ ವೇಳೆ ಸೂರ್ಯ ಕುಮಾರ್ ಯಾದವ್ (52 ರನ್, 36 ಎಸೆತ, 5 ಬೌಂಡರಿ, 2 ಸಿಕ್ಸರ್ ) ಹಾಗೂ ತಿಲಕ್ ವರ್ಮ (38*ರನ್, 27 ಎಸೆತ, 3 ಬೌಂಡರಿ, 2 ಸಿಕ್ಸರ್) 4ನೇ ವಿಕೆಟ್ ಗೆ ಸೇರಿಸಿದ 49 ಎಸೆತಗಳ 83 ರನ್ ಗಳ ಜೊತೆಯಾಟದ ನೆರವಿನಿಂದ 4 ವಿಕೆಟ್ ಗೆ 161 ರನ್ ಕಲೆಹಾಕಿತು. ಮೊದಲ ಬೌಂಡರಿ ಬಾರಿಸಲು 18 ಎಸೆತ ಆಡಿದ್ದ ಸೂರ್ಯಕುಮಾರ್ ಯಾದವ್, ನಂತರ ತಾವು ಎದುರಿಸಿದ 17 ಎಸೆತಗಳಲ್ಲಿ 4 ಬೌಂಡರಿ, ಹಾಗೂ 2 ಸಿಕ್ಸರ್ ಗಳನ್ನು ಸಿಡಿಸಿ ಗಮನಸೆಳೆದಿದ್ದರು.ಮುಂಬೈ ಇಂಡಿಯನ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕೆಕೆಆರ್ ತಂಡದ ಆರಂಭಿಕ ವೇಗದ ಬೌಲರ್ ಗಳಾಗಿದ್ದ ಉಮೇಶ್ ಯಾದವ್ ( ) ಹಾಗೂ ರಸೀಖ್ ಸಲಾಮ್ ( ), ಮುಂಬೈ ಇಂಡಿಯನ್ಸ್ ತಂಡ ಒಂದೊಂದು ರನ್ ಗೂ ಪರದಾಟ ನಡೆಸುವಂತೆ ಮಾಡಿದರು. ಈವರೆಗೂ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿರುವ ನಾಯಕ ರೋಹಿತ್ ಶರ್ಮ, 12 ಎಸೆತಗಳಲ್ಲಿ 3 ರನ್ ಬಾರಿಸಿ ಉಮೇಶ್ ಯಾದವ್ ಎಸೆತದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಗೆ ವಿಕೆಟ್ ನೀಡಿದರು. ಈ ವೇಳೆ ಮುಂಬೈ ಇಂಡಿಯನ್ಸ್ ತಂಡ ಎದುರಿಸಿದ 17 ಎಸೆತಗಳಲ್ಲಿ ಕೇವಲ 6 ರನ್ ಬಾರಿಸಿತ್ತು.ಬಳಿಕ ಆರಂಭಿಕ ಆಟಗಾರ ಹಾಗೂ ವಿಕೆಟ್ ಕೀಪರ್ ಇಶಾನ್ ಕಿಶನ್ (14 ರನ್. 21 ಎಸೆತ, 1 ಬೌಂಡರಿ) ಹಾಗೂ ಬೇಬಿ ಎಬಿ ಖ್ಯಾತಿಯ ಡೆವಾಲ್ಡ್ ಬ್ರೇವಿಸ್ (29 ರನ್, 19 ಎಸೆತ, 2 ಬೌಂಡರಿ, 2 ಸಿಕ್ಸರ್) ಅಮೂಲ್ಯ 36 ರನ್ ಜೊತೆಯಾಟವಾಡಿದರು. ಇದಲ್ಲಿ ಬ್ರೇವಿಸ್ ( ) ಅವರ ಸೂಪರ್ ಶಾಟ್ ಗಳು ರಂಜನೀಯವಾಗಿದ್ದವು. ಆಟದಲ್ಲಿ ಎಬಿಡಿ ಶೈಲಿಯನ್ನೇ ಹೋಲುವ ಬ್ರೇವಿಸ್ 2 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ಮಿಂಚಿದರು. 8ನೇ ಓವರ್ ನಲ್ಲಿ ದಾಳಿಗಿಳಿದ ವರುಣ್ ಚಕ್ರವರ್ತಿ, ಬ್ರೇವಿಸ್ ಅವರ ಸ್ಪೋಟಕ ಆಟಕ್ಕೆ ಅಂತ್ಯ ಹಾಡಿದರು. ಇನ್ನೊಂದೆಡೆ ರನ್ ಗಳಿಸಲು ಪರದಾಟ ನಡೆಸುತ್ತಿದ್ದ ಇಶಾನ್ ಕಿಶನ್, ಬ್ರೇವಿಸ್ ಔಟಾದ ಮೊತ್ತಕ್ಕೆ 10 ರನ್ ಕೂಡಿಸುವ ವೇಳೆಗೆ ಪ್ಯಾಟ್ ಕಮ್ಮಿನ್ಸ್ ಗೆ ವಿಕೆಟ್ ಒಪ್ಪಿಸಿದ್ದರು.ಕೋಲ್ಕತ ನೈಟ್ ರೈಡರ್ಸ್ ತಂಡ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿತ್ತು. ಟಿಮ್ ಸೌಥಿ ಬದಲಿಗೆ ಪ್ಯಾಟ್ ಕಮ್ಮಿನ್ಸ್ ಸ್ಥಾನ ಪಡೆದರೆ, ಶಿವಂ ಮಾವಿ ಬದಲು ರಸೀಖ್ ಸಲಾಮ್ ಕೆಕೆಆರ್ ಪರವಾಗಿ ಪಾದಾರ್ಪಣೆ ಮಾಡುವ ಅವಕಾಶ ಪಡೆದುಕೊಂಡರು. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡ ಕೂಡ ಪಂದ್ಯಕ್ಕೆ ಎರಡು ಬದಲಾವಣೆ ಮಾಡಿತ್ತು. ಗಾಯದಿಂದ ಚೇತರಿಸಿಕೊಂಡಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಸ್ಥಾನ ಪಡೆದರೆ, ಅನ್ಮೋಲ್ ಪ್ರೀತ್ ಸಿಂಗ್ ಇವರಿಗಾಗಿ ಸ್ಥಾನ ತ್ಯಾಗ ಮಾಡಿದರು. ಇನ್ನು ಟಿಮ್ ಡೇವಿಡ್ ಬದಲು ಡೆವಾಲ್ಡ್ ಬ್ರೇವಿಸ್ ಆಡುವ ಬಳಗದಲ್ಲಿ ಅವಕಾಶ ಪಡೆದರು.