ಆಮೀರ್​ ಖಾನ್ ಪುತ್ರಿಯ ಅರಿಶಿಣ ಶಾಸ್ತ್ರ: ಎರಡನೆ ವಿಚ್ಛೇದಿತ ಪತ್ನಿಯೂ ಹಾಜರ್​! ಭರ್ಜರಿ ತಯಾರಿ ಹೀಗಿದೆ ನೋಡಿ.. ​ ಆಮೀರ್​ ಖಾನ್ ಪುತ್ರಿ ನಟಿ ಇರಾ ಖಾನ್​ ಮದುವೆಯ ಮುನ್ನಾದಿನವಾದ ಇಂದು ಅರಿಶಿಣ ಶಾಸ್ತ್ರ ಭರ್ಜರಿಯಾಗಿ ನಡೆಯುತ್ತಿದೆ. ಇದರ ತಯಾರಿಯ ವಿಡಿಯೋ ವೈರಲ್​ ಆಗಿದೆ. ನಾಳೆ ಅಂದರೆ ಜನವರಿ 3ನೇ ತಾರೀಖು ನಟ ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್​ ಮದುವೆ. ಇದಾಗಲೇ ವಾರದಿಂದ ಮದುವೆಯ ಪೂರ್ವ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಮದುವೆಯ ಹಿಂದಿನ ದಿನ ಅಂದರೆ ಇಂದು ಅರಿಶಿಣ ಶಾಸ್ತ್ರ ನಡೆಯುತ್ತಿದೆ. ಇದಕ್ಕೆ ಇದಾಗಲೇ ಹಲವಾರು ಮಂದಿ ಭೇಟಿ ಕೊಟ್ಟಿದ್ದಾರೆ. ಅದರಲ್ಲಿ ಬಹಳ ಗಮನ ಸೆಳೆಯುತ್ತಿರುವುದು ಆಮೀರ್​ ಖಾನ್​ ಅವರ ದ್ವಿತೀಯ ಪತ್ನಿ ಕಿರಣ್​ ರಾವ್​ ಅವರ ಹಾಜರಿ. ಮಹಾರಾಷ್ಟ್ರದ ಶೈಲಿನಲ್ಲಿ ಸೀರೆ ಧರಿಸಿ ಬಂದಿರುವ ಕಿರಣ್​ ಅವರು ಪುತ್ರಿಯ ಮದುವೆಯ ಸಮಾರಂಭಕ್ಕೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಂದಹಾಗೆ ಆಮೀರ್​ ಖಾನ್​ ಅವರು ಎರಡನೆಯ ಪತ್ನಿಯೂ ವಿಚ್ಛೇದನ ನೀಡಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್​ 2005ರಲ್ಲಿ ಕಿರಣ್​ ರಾವ್​ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್​ ಕೊಟ್ಟಿದ್ದಾರೆ. ಇದೀಗ ಮಗಳ ಮದುವೆಯಲ್ಲಿ ಕಿರಣ್​ ಹಾಜರಾಗಿದ್ದಾರೆ. ಅಂದಹಾಗೆ, ಇರಾ ಖಾನ್ ತಮ್ಮ ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ಜೊತೆ ಮದುವೆಯಾಗುತ್ತಿದ್ದಾರೆ. ಇವರು ಮುಂಬೈನಲ್ಲಿ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರ ಎಂಗೇಜ್​ಮೆಂಟ್​ ಈವೆಂಟ್ ಕೂಡ ಕುತೂಹಲವಾಗಿ ನಡೆದಿತ್ತು. 2021ರ ಸೆಪ್ಟೆಂಬರ್​ನಲ್ಲಿ, ನುಪೂರ್ ಶಿಖಾರೆ ಸೈಕ್ಲಿಂಗ್ ಈವೆಂಟ್​ನಲ್ಲಿ ಭಾಗಿಯಾಗಿದ್ದರು. ಆ ಕಾರ್ಯಕ್ರಮಕ್ಕೆ ಪ್ರೇಯಸಿ ಇರಾ ಖಾನ್ ಕೂಡ ಭಾಗಿಯಾಗಿದ್ದರು. ಆಗ ನುಪೂರ್ ಪ್ರೇಯಸಿ ಇರಾಗೆ ಪ್ರಪೋಸ್ ಮಾಡಿದ್ದರು. ಎಲ್ಲರ ಮುಂದೆಯೇ ಮಂಡಿಯೂರಿ ಪ್ರಪೋಸ್ ಮಾಡಿ, ರಿಂಗ್ ಹಾಕಿ ಲವ್ ಯು ಹೇಳಿ, ಲಿಪ್ ಕಿಸ್ ಮಾಡಿದ್ದರು. ನುಪೂರ್, ಮಂಡಿಯೂರಿ ನೀವು ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದರು. ಆಗ ಇರಾ ಮೈಕ್ ತೆಗೆದುಕೊಂಡು ಹೌದು ಎಂದು ಹೇಳಿದರು. ಬಳಿಕ ಇಬ್ಬರು ಹಗ್ ಮಾಡಿ ಪ್ರೀತಿ ವ್ಯಕ್ತಪಡಿಸಿದರು. ನವ ಜೋಡಿಗೆ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ವಿಶ್ ಮಾಡಿದ್ದರು. ಇದಾದ ಬಳಿಕ ಎಂಗೇಜ್​ಮೆಂಟ್​ ಆಗಿತ್ತು. ನಿಶ್ಚಿತಾರ್ಥವಾಗಿ ವರ್ಷದ ಬಳಿಕ ಇದೀಗ ಮದುವೆಗೆ ಜೋಡಿ ಸಿದ್ಧವಾಗಿದೆ. (@) ಇನ್ನು ಇರಾ ಭಾವಿ ಪತಿ ನೂಪುರ್ ಶಿಖರೆ ಕುರಿತು ಹೇಳುವುದಾದರೆ, ಅವರು 17 ವರ್ಷದವರಾಗಿದ್ದಾಗಲೇ ಜಿಮ್ನಲ್ಲಿ ಟ್ರೈನರ್ ಆಗಿ ಕೆಲಸ ಮಾಡಲು ಶುರುಮಾಡಿದ್ರು. ಶಿಕ್ರೆ ಫಿಟ್​ನೆಸ್​ಗೆ ಇರಾ ತುಂಬಾ ಪ್ರಭಾವಿತರಾಗಿದ್ದರು ಮತ್ತು ಅವರನ್ನು ಸೂಪರ್ ಫಿಟ್ ಮನುಷ್ಯ ಎಂದು ಕರೆದಿದ್ದಾರೆ. ಜಿಮ್​ನಲ್ಲಿ ಭೇಟಿಯಾದ ಈ ಜೋಡಿ ಸ್ನೇಹಿತರಾದರು ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರ ಲವ್ ಬಗ್ಗೆ ತಿಳಿದ ಬಳಿಕ ಆಮೀರ್ ಖಾನ್ ಮದುವೆಗೆ ಹಸಿರು ನಿಶಾನೆ ತೋರಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಇರಾ ಖಾನ್ ಅವರು ಖಿನ್ನತೆಯೊಂದಿಗೆ ತಮ್ಮ ದೀರ್ಘಕಾಲದ ಹೋರಾಟದ ಬಗ್ಗೆ ಚರ್ಚಿಸಿದ್ದರು ಮತ್ತು ಕುಟುಂಬದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಿದ್ದರು. ಇರಾ ಖಾನ್ ಖಿನ್ನತೆಯೊಂದಿಗಿನ ತನ್ನ ಅನುಭವಗಳ ಪರಿಣಾಮವಾಗಿ ತನ್ನ ನಡವಳಿಕೆಯು ಹೇಗೆ ಬದಲಾಯಿತು ಎಂಬುದನ್ನು ವಿವರಿಸಿದರು. ಅವರು ಆಗಾಗ್ಗೆ ಅಳುತ್ತಿದ್ದರು ಮತ್ತು ದಿನಗಟ್ಟಲೆ ಉಪವಾಸ ಇರುತ್ತಿದ್ದರು ಎಂದು ಹೇಳಿಕೊಂಡಿದ್ದರು. 'ನಾನು ಜೀವಂತವಾಗಿರಲು ಬಯಸುವುದಿಲ್ಲ ಎಂಬ ವಿಷಯವನ್ನು ನನ್ನ ತಾಯಿ ಕಂಡುಕೊಂಡರು.ದಿನದಲ್ಲಿ ಕಡಿಮೆ ಅವಧಿ ಜೀವಂತ ಇರಬಹುದು ಎಂದು ನಾನು ದಿನದ ಹೆಚ್ಚು ಕಾಲ ಮಲಗುತ್ತಿದ್ದೆ' ಎಂದು ಇರಾ ಖಾನ್‌ ಜೊತೆಗಿನ ತನ್ನ ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದರು. (@) (@.)