ಸದಾ ಸಾಧನೆಯ ಗುಂಗಲ್ಲೇ ಇರೋ ಇಸ್ರೋ ಸಿವನ್‌ (ಶಿವ)ಗೆ ದಕ್ಕದ ಚಂದ್ರನೇ..? ಭಾರತೀಯರ ಪ್ರಾರ್ಥನೆ ಫಲಿಸಲೇ ಇಲ್ಲ. ಇನ್ನೇನು ಚಂದ್ರನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಕ್ರಮ ದಾರಿ ತಪ್ಪಿದ. ಪ್ರತಿಯೊಬ್ಬರಿಗೂ ಅತ್ಯಂತ ದುಃಖದ ವಿಷಯವಿದು. ಅದರಲ್ಲಿಯೂ 12 ವರ್ಷಗಳ ಶ್ರಮ ಈ ರೀತಿ ವ್ಯರ್ಥವಾಗಿದ್ದು ಇಸ್ರೋ ಮುಖ್ಯಸ್ಥರಿಗೆ ಅರಗಿಸಿಕೊಳ್ಳುವುದು ಕಷ್ಟ. ಇವರಿಗೆ ಧೈರ್ಯ ಹೇಳಿದ್ದಾರೆ ಸುವರ್ಣ ನ್ಯೂಸ್‌ನ ರಮಾಕಾಂತ್. ನಮಸ್ಕಾರ ಇಸ್ರೋ ಮುಖ್ಯಸ್ಥ ಸಿವನ್ ಅವರೇ.....ನಿಜ ಹೇಳಿ ನೀವು ನಿದ್ರೆ ಮಾಡಿ ಎಷ್ಟು ದಿನಗಳಾದವು? ರೆಕ್ಕೆಯ ಕುದುರೆ ಹತ್ತಿ ರೆಪ್ಪೆ ಮುಚ್ಚದೆ ಚಂದ್ರನಿಗೆ ಜಿಗಿದಿದ್ದವರು. ಕಂಡ ಚಂದಿರ ಸಿಗಲಿಲ್ಲ ಕಾಲೂರಲು. ಇರಲಿ. ಎಲ್ಲಿಗೆ ಹೋದಾನು? ಅದೇಕೋ ಗೊತ್ತಿಲ್ಲ.ಇಂದು ನಿಮ್ಮೊಂದಿಗೆ ನಿಮ್ಮಂತೆಯೇ ಅತ್ತ ಕಣ್ಣುಗಳೆಷ್ಟೋ? ನಿದ್ರೆ ಮಾಡದ ಅಷ್ಟೂ ಕಂಗಳ ಪ್ರತಿನಿಧಿಯಂತೆ ಕಾದಿದ್ದವರು. ಯಾರಿಗೂ ಎಟುಕದ ಚಂದ್ರನ ದಕ್ಷಿಣದಲ್ಲಿ ವಿಕ್ರಮನ ಗರ್ಭದಿಂದ ಪ್ರಜ್ಞಾನ್ ಇಳಿಯಬೇಕಿತ್ತಷ್ಟೇ. ಇದ್ದಿದ್ದು 2.1 ಕಿ.ಮೀ. ನಮ್ಮ ವ್ಯಾಪ್ತಿ ಪ್ರದೇಶದಿಂದ ವಿಕ್ರಮ ದೂರಾಗಿಬಿಟ್ಟ. ಕಣ್ಣ ಮುಂದೆಯೇ ಆಡುತ್ತಿದ್ದ ಕಂದ ಕಣ್ಮರೆಯಾಗಿಬಿಟ್ಟಂತೆ. ಶತ್ರು‌ ಕೂಡ ಹಾರೈಸಿದ್ದ ಸಾಧನೆ ಅದು. ಅತ್ತೇ ಬಿಟ್ಟಿರಿ ಮೋದಿಯನ್ನ ತಬ್ಬಿ. ಆಗಲಿಲ್ಲ ನಿಜ. ಆಗುವುದೇ ಇಲ್ಲವೇ? ಈ ಶಬ್ದವನ್ನೇ ಕಿತ್ತೆಸೆದು ಗತ್ತಿನಿಂದ ದೇಶವೇ ತಲೆ ಎತ್ತುವಂತೆ ಮಾಡಿದ್ದುಇಸ್ರೋಹಾಗೂ ಅದರಲ್ಲಿ ಮೂರು ಹೊತ್ತೂ ಶ್ರಮಿಸುವ ನಿಮ್ಮಂಥ ವಿಜ್ಞಾನಿಗಳು. ಬೀಳುವುದು ಸೋಲಲ್ಲ, ಮೇಲೇಳಲು ನಿರಾಕರಿಸುವುದು ಸೋಲು ಎಂಬ‌ ಮಾತಿಗೆ ನೀವೇ ಸಾಕ್ಷಿ. ಕ್ರಯೋಜನಿಕ್ ಎಂಜಿನ್‌ಗಳಲ್ಲಿ ನಿಮ್ಮ ಕೈ ಇಲ್ಲದಿದ್ದರೆ ಅದು ಕ್ರಯೋಜನಿಕ್ ಎಂಜಿನ್ನೇ ಅಲ್ಲ. 104 ಉಪಗ್ರಹಗಳನ್ನ ಏಕ ಕಾಲದಲ್ಲಿ ನಭಕ್ಕೆ ಚಿಮ್ಮಿಸಲು ನೀವೇ ಬರಬೇಕಿತ್ತು. ಅಂಥ ಸಾಧಕ.ಏರೋಸ್ಪೇಸ್ ಎಂಜಿನಿಯರಿಂಗ್ ಮಾಸ್ಟರ್ಸ್ ಮಾಡಿಕೊಂಡಿದ್ದು ಬೆಂಗಳೂರಿನಲ್ಲೇ. ಐಐಎಸ್‌ಸಿಯಲ್ಲಿ. ಇಸವಿ 1982. ಕನ್ಯಾಕುಮಾರಿಯ ಸಾಧಾರಣ ರೈತನ‌‌‌ ಮಗ. ವಂಶಕ್ಕೇ‌ ಪದವಿ ಪಡೆದ ಮೊದಲಿಗರು. ಆ ಸಾಧನೆ ಏನು ಕಡಿಮೆ ಅಲ್ಲ ಬಿಡಿ. ಮೇಲಸರಕ್ಕಲ್ ವಿಲ್ಲೈ ಹಳ್ಳಿಯಲ್ಲಿ ತಮಿಳು ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಓದಬೇಕಾದರೆ ನೀವು ಎಣಿಸಿದ ಚುಕ್ಕಿಗಳೆಷ್ಟೋ? , , , ..ಅಬ್ಬ! ನೀವು ನಿಖರವಿಲ್ಲದಿದ್ದರೆ ಇಷ್ಟು ಯಶಸ್ಸುಗಳು ಎಲ್ಲಿ ಸಾಧ್ಯವಿತ್ತು? ()ಗೆಂದೇ ಸೇರಿದವರು. ಮಾಸ್ಟರ್ಸ್ ಮಾಡಿಕೊಂಡ ಅದೇ ವರ್ಷ. 2018 ರ ಜನವರಿಯಿಂದ ಇಸ್ರೋ ಚುಕ್ಕಾಣಿ ಹಿಡಿದು, ಜ್ಞಾನಿಗಳ ಹಿಂಡಿನೊಂದಿಗೆ ಗೆಲುವಿನದ್ದೇ ಗುಂಗಿನಲ್ಲಿ ದುಡಿಯುತ್ತಿದ್ದೀರಿ. ನಿಮ್ಮ ದುಡಿಮೆ‌ ಅನೇಕರಂತೆ ಹೊಟ್ಟೆ ಪಾಡಿಗಲ್ಲ. ಕನಸುಗಳು ನನಸಾದರೆ ಅದೇ‌ ಕೂಲಿ. ಚಂದ್ರ, ಮಂಗಳರನ್ನ ಹೇಗೆ ತಂದು ಕೊಡೋಣ? ನೀವೇ ಕೊಡಿಸುತ್ತೀರೆಂದು ನಂಬುತ್ತೇವೆ. ವಿಕ್ರಮ ಹೋಗದಿದ್ದರೇನು. ಮನುಷ್ಯನನ್ನೇ ಇಳಿಸಿಬಿಡಿ 2022ಕ್ಕೆ. ಮತ್ತೊಂದು ಮನುಕುಲದ‌ ಮಹಾನ್ ಜಿಗಿತವಾಗಲಿ. ಇರುತ್ತದೆ ಸದಾಭಾರತೀಯರೆಲ್ಲರ ಶುಭ ಹಾರೈಕೆ ನಿಮ್ಮೊಂದಿಗೆ, ನಮ್ಮ ಹೆಮ್ಮೆಯ ಇಸ್ರೋದೊಂದಿಗೆ. ಶಿವನಿಗೆ ದಕ್ಕದ ಚಂದ್ರನೇ?ರಮಾಕಾಂತ್ ಆರ್ಯನ್, ಸುವರ್ಣ ನ್ಯೂಸ್ "