ವಾಟ್ಸ್ಆ್ಯಪ್, ಫೇಸ್ಬುಕ್ಗೆ ಪ್ರತಿಸ್ಪರ್ಧಿ ಬಂದಿದೆ ನವದೆಹಲಿ(ಸೆ.22):ಸಂವಹನ ಕ್ಷೇತ್ರದಲ್ಲಿ ದಿನ ದಿನವೂ ಹೊಸ ಸಂಶೋಧನೆಗಳಾಗುತ್ತಲೇ ಇವೆ. ಸದ್ಯ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದುಕೊಂಡಿರುವುದು ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌. ಅವೆರಡನ್ನು ವಿಶ್ವದ ಕೋಟ್ಯಂತರ ಜನ ಬಳಕೆ ಮಾಡುತ್ತಿದ್ದಾರೆ. ಈ ಕ್ಷೇತ್ರಕ್ಕೆ ಸಚ್‌ರ್‍ ಎಂಜಿನ್‌ ದಿಗ್ಗಜ ಗೂಗಲ್‌ ಕೂಡ ಪ್ರವೇಶ ಮಾಡಿದ್ದು, ‘ಅಲ್ಲೋ’ ಎಂಬ ಮೆಸೇಜಿಂಗ್‌ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿ ಬಳಕೆಗೆ ಅನುವು ಮಾಡಿಕೊಟ್ಟಿದೆ ಎಂದು ‘ಗ್ಯಾಜೆಟ್‌ ನೌ’ ವರದಿ ಮಾಡಿದೆ. ಹೊಸ ಮೆಸೇಜಿಂಗ್‌ ಆ್ಯಪ್‌ ಬಗ್ಗೆ ಈ ವರ್ಷದ ಆರಂಭದಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಆಯೋಜಿಸಲಾಗಿದ್ದ ತಂತ್ರಜ್ಞಾನ ಸಮ್ಮೇಳನದಲ್ಲಿ ಗೂಗಲ್‌ ಘೋಷಣೆ ಮಾಡಿತ್ತು. ಅಲ್ಲೋ ಗೂಗಲ್‌ ನೆರವಿನಿಂದಲೇ ಕೆಲಸ ಮಾಡುತ್ತದೆ. ಫೇಸ್‌ಬುಕ್‌ನ ವಾಟ್ಸ್‌ಆ್ಯಪ್‌ನಂತೆಯೇ ಅದು ಕೆಲಸ ಮಾಡುತ್ತದೆ. ಮೊಬೈಲ್‌ ಬಳಕೆದಾರರು ನೀಡುವ ಸಂಖ್ಯೆಯನ್ನೇ ಅದು ಗುರುತಿನ ಸಂಖ್ಯೆಯನ್ನಾಗಿ ಪರಿಗಣಿಸುತ್ತದೆ. ಗೂಗಲ್‌ ಖಾತೆಗಳನ್ನೂ ಕೂಡ ಅದಕ್ಕೆ ಲಿಂಕ್‌ ಮಾಡಲು ಅವಕಾಶ ಉಂಟು. ಒಂದು ತಿಂಗಳ ಹಿಂದೆ ಅದು ಬಿಡುಗಡೆಯಾಗಿದೆ. ಗೂಗಲ್‌ ಪ್ಲೇಸ್ಟೋರ್‌ ಮೂಲಕ ವಿಶ್ವಾದ್ಯಂತ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಅದನ್ನು ಬಳಕೆ ಮಾಡುತ್ತಿದ್ದಾರೆಂದು ಗೂಗಲ್‌ ಹೇಳಿಕೊಂಡಿದೆ. ಹೊಸ ವ್ಯವಸ್ಥೆಯಲ್ಲಿ ಅಳವಡಿಸಲಾಗಿರುವ ವಿಶೇಷತೆ ಏನೆಂದರೆ ಚಾಟ್‌ ವಿಂಡೋವನ್ನು ಬಿಟ್ಟು ಹೋಗದೆ ಅದರಲ್ಲಿಯೇ ಇರುವ ಸಚ್‌ರ್‍ ಎಂಜಿನ್‌ಲ್ಲಿ ಶೋಧಕ್ಕೆ ಅವಕಾಶ ಕಲ್ಪಿಸಲಾಗಿದೆ. ವಾಟ್ಸ್‌ಆ್ಯಪ್‌ನಲ್ಲಿರುವಂತೆ ಗೂಢಲಿಪ್ಯಂತೀಕರಣ (ಎನ್‌ಕ್ರೈಪ್ಶನ್‌) ವನ್ನು ಅಲ್ಲೋದಲ್ಲಿಯೂ ನೀಡಲಾಗಿದೆ. ಮಾತ್ರವಲ್ಲದೆ ಚಾಟ್‌ ಮಾಡಿದ್ದು ಅಗತ್ಯವಿಲ್ಲದೇ ಅವುಗಳನ್ನು ಡಿಲೀಟ್‌ ಮಾಡುವ ಅವಕಾಶವೂ ಇದೆ. ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಚಾಟ್‌ ಅನ್ನು ಸ್ವಯಂ ಚಾಲಿತವಾಗಿ ಡಿಲೀಟ್‌ ಮಾಡುವುದಕ್ಕೆ ಸಮಯ ನಿಗದಿಗೂ ಅವಕಾಶ ಮಾಡಿಕೊಡಲಾಗಿದೆ. ಇದರ ಜತೆಗೆ ಆಯಾ ದೇಶಕ್ಕೆ ಅನುಕೂಲಕ್ಕೆ ತಕ್ಕಂತೆ ಎಮೋಜಿಗಳ ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಅದರಲ್ಲಿರುವ ಕೊರತೆ ಏನೆಂದರೆ ಡಾಕ್ಯುಮೆಂಟ್‌ ಶೇರಿಂಗ್‌, ಕಾಲ್‌ ವ್ಯವಸ್ಥೆ ಇಲ್ಲ. ಆದರೆ ಇವೆರಡು ವಾಟ್ಸ್‌ ಆ್ಯಪ್‌ನಲ್ಲಿವೆ. ಗೂಗಲ್‌ ಹೇಳಿಕೆ ಪ್ರಕಾರ ಶೀಘ್ರವೇ ಆ್ಯಪ್‌ಗೆ ವಿಡಿಯೋ ಕಾಲಿಂಗ್‌ ವ್ಯವಸ್ಥೆಯನ್ನು ಅಳವಡಿಸಲಿದೆ.