ಮನೆಯಲ್ಲಿ ಹಾವು ಕಾಣಿಸಿಕೊಳ್ಳೋದು ಒಳ್ಳೇದೋ ಕೆಟ್ಟದ್ದೋ? ಮನೆಯಲ್ಲಿ ಅಪರೂಪಕ್ಕೆ ಹಾವು ಕಾಣಿಸಿಕೊಳ್ಳುವುದಿದೆ. ಅದನ್ನು ಮನೆಯಿಂದ ಹೊರ ಕಳಿಸುವವರೆಗೆ ಒಂದು ರೀತಿಯ ಭಯವಾದರೆ, ನಂತರದಲ್ಲಿ ಅದು ಏನಕ್ಕಾಗಿ ಬಂದಿತ್ತು, ಇದು ಯಾವುದರ ಸೂಚನೆ ಎಂಬ ಕಳವಳ ಕಾಡುತ್ತದೆ. ಇಷ್ಟಕ್ಕೂ ಹಾವು ಮನೆಯಲ್ಲಿ ಕಾಣಿಸಿಕೊಳ್ಳುವುದು ಅಪಶಕುನ ಮುನ್ಸೂಚನೆಯೇ? ಹಾವು ಮನೆಯೊಳಗೆ ಬರುವುದು ಸಾಮಾನ್ಯ ಸಂಗತಿಯಲ್ಲ. ಹಾವನ್ನು ಎಷ್ಟೇ ದೇವರೆಂದು ಪೂಜಿಸಬಹುದು, ಆದರೆ ಅಪರೂಪಕ್ಕೆ ಮನೆಯೊಳಗೆ ಹಾವು ಕಾಣಿಸಿಕೊಂಡರೆ ಮನೆಯ ಎಲ್ಲ ಸದಸ್ಯರಲ್ಲೂ ನಡುಕ ಹುಟ್ಟುತ್ತದೆ. ಹಾವು ಎಲ್ಲಿ ಹೋಗುತ್ತದೆ ಎಂದು ಕಾವಲು ಕಾಯುತ್ತಾ, ತಮ್ಮ ಬಳಿ ಬರದಂತೆ ಎಚ್ಚರ ವಹಿಸುತ್ತಾ ನಿಲ್ಲುವುದರಲ್ಲಿ ಉಳಿದೆಲ್ಲ ಕೆಲಸ ಬಾಕಿ ಬೀಳುತ್ತದೆ. ಹೀಗೆ ಹಾವು ಬಂದಾಗ ಮೊದಲು ಅದನ್ನು ಹೊರಗೆ ಕಳಿಸುವ ಬಗ್ಗೆಯೇ ಯೋಚನೆ ಇರುತ್ತದೆ. ಒಮ್ಮೆ ಹಾವು ಹೊರ ಹೋದ ಮೇಲೆ ಅದು ಏತಕ್ಕಾಗಿ ಬಂದಿತ್ತು, ಮನೆಗೆ ಹೇಗೆ ಬಂದಿತು, ಏನಾದರೂ ಮುನ್ಸೂಚನೆ ಕೊಡಲು ಬಂದಿತ್ತೇ, ಅಪಾಯ ಕಾದಿದೆಯೇ, ಸರ್ಪದೋಷ ಇದೆಯೇ ಹೀಗೆ ಹಲವಾರು ಗೊಂದಲಗಳು ಮನಸ್ಸಿನಲ್ಲಿ ಕಾಡತೊಡಗುತ್ತವೆ. ಕನಸಿನಲ್ಲಿ ಹಾವನ್ನು ನೋಡುವುದು ಹೇಗೆ ಸೂಚನೆಗಳಾಗಿದೆಯೋ ಹಾಗೆಯೇ ಮನೆಯಲ್ಲಿ ಹಾವು ಕಾಣಿಸಿಕೊಳ್ಳುವುದು ಕೂಡಾ ಕೆಲ ಶುಭ ಅಥವಾ ಅಶುಭ ಸಂಕೇತಗಳನ್ನು ನೀಡುತ್ತದೆ. ಮನೆಯಲ್ಲಿ ಹಾವು ಕಂಡರೆ ಸಿಗುವ ಶುಭ ಮತ್ತು ಅಶುಭ ಸಂಕೇತಗಳನ್ನು ತಿಳಿಯೋಣ. ಮನೆಯಲ್ಲಿ ಹಾವು ಶುಭವೋ ಅಲ್ಲವೋ? ಮನೆಯಲ್ಲಿ ಕಪ್ಪು ಹಾವಿನ ಆಗಮನವನ್ನು ಅತ್ಯಂತ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆರ್ಥಿಕ ಪ್ರಗತಿ ಮತ್ತು ಪ್ರಗತಿಗೆ ಕಪ್ಪು ಹಾವು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ನಿಮ್ಮ ಮನೆಯಲ್ಲಿ ಕಪ್ಪು ಹಾವು ಕಾಣಿಸಿಕೊಂಡರೆ, ನಿಮ್ಮ ಜೀವನದಲ್ಲಿ ಪ್ರಗತಿಯು ಬರಲಿದೆ ಮತ್ತು ಮಹಾಲಕ್ಷ್ಮಿಯ ಆಶೀರ್ವಾದವು ನಿಮ್ಮ ಮೇಲೆ ಬೀಳಲಿದೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕು.