ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ 70 ಶೇ. ಉದ್ಯೋಗ ಮೀಸಲು : ಖಡಕ್ ಆದೇಶ ರಾಜ್ಯದಲ್ಲಿ ಕೈಗಾರಿಕೆಗಳಲ್ಲಿ ಶೇ.70 ರಷ್ಟು ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ ಒದಗಿಸಬೇಕು ಎಂದು ಕರ್ನಾಟಕ ಸರ್ಕಾರ ಖಡಕ್ ಆದೇಶ ನೀಡಿದೆ. ವಿಧಾನ ಪರಿಷತ್‌ (ಮಾ.24):ಸರ್ಕಾರದ ಎಲ್ಲ ಸೌಲಭ್ಯ ಪಡೆದು ಸ್ಥಾಪಿಸಿರುವ ಕೈಗಾರಿಕೆಗಳಲ್ಲಿ ಅರ್ಹತೆ ಇದ್ದರೂ ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ, ಅಂತಹ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಎಚ್ಚರಿಸಿದ್ದಾರೆ. ಕಾಂಗ್ರೆಸ್‌ ಸದಸ್ಯ ಎಂ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೈಗಾರಿಕಾ ನೀತಿ 2020-25ರ ಅನ್ವಯ ರಿಯಾಯಿತಿ ಹಾಗೂ ಸೌಲಭ್ಯ ಪಡೆಯುವ ಕೈಗಾರಿಕೆಗಳು ‘ಡಿ’ ವರ್ಗದ ಹುದ್ದೆಗಳಲ್ಲಿ ಶೇ.100ರಷ್ಟುಸ್ಥಳೀಯರಿಗೆ ಉದ್ಯೋಗ ನೀಡಬೇಕು. ಒಟ್ಟಾರೆ ಶೇ. 70 ರಷ್ಟುಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕಾಗುತ್ತದೆ. ಬಹುತೇಕ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗ ನೀಡಿವೆ. ಹೀಗಿದ್ದರೂ ಕೈಗಾರಿಕೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು. ಪೌರಾಡಳಿತ ಸಚಿವ ಎಂಟಿಬಿಯಿಂದ ಉದ್ಯೋಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ . ಬೆಂಗಳೂರಿಗೆ ಸ್ಥಳಾಂತರಕ್ಕೆ ಮನವಿ: ಕೇರಳದ ಕೊಚ್ಚಿಯಲ್ಲಿ ಇರುವ ವಿಶೇಷ ಆರ್ಥಿಕ ವಲಯ(ಎಸ್‌ಇಝಡ್‌) ಆಯುಕ್ತರ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶೆಟ್ಟರ್‌ ತಿಳಿಸಿದರು. ಕಾಂಗ್ರೆಸ್‌ ಸದಸ್ಯ ಪಿ.ಆರ್‌. ರಮೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಇರುವ 36 ಎಸ್‌ಇಝಡ್‌ ಪೈಕಿ 25 ಎಸ್‌ಇಝಡ್‌ಗಳು ಬೆಂಗಳೂರಿನಲ್ಲಿ ಇವೆ. ಸದ್ಯ ಬೆಂಗಳೂರಿನಲ್ಲಿರುವ ಎಸ್‌ಇಝಡ್‌ ಉಪಕಚೇರಿಯ ಜಂಟಿ ಅಭಿವೃದ್ಧಿ ಆಯುಕ್ತರು ಇಲ್ಲಿಯ ಎಸ್‌ಇಝಡ್‌ ನಿಯಂತ್ರಣ ಮಾಡುತ್ತಿದ್ದಾರೆ. ಆದರೂ ಆಯುಕ್ತರ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದರು.