ಶೇ.25ರಷ್ಟು 14-18 ವಯಸ್ಸಿನ ಗ್ರಾಮೀಣ ಮಕ್ಕಳಿಗೆ 2ನೇ ತರಗತಿ ಪಾಠ ಕೂಡಾ ಸರಿಯಾಗಿ ಓದೋಕೆ ಬರೋಲ್ಲ: ವರದಿ ಗ್ರಾಮೀಣ ಭಾಗದ ಶಿಕ್ಷಣಕ್ಕೆ ಸಂಬಂಧಿಸಿದ ಕಳವಳಕಾರಿ ವರದಿಯೊಂದು ಹೊರೆಗೆ ಬಿದ್ದಿದೆ. ಅದರಂತೆ, ಶೇ.25ರಷ್ಟು 14-18 ವಯಸ್ಸಿನ ಗ್ರಾಮೀಣ ಮಕ್ಕಳಿಗೆ 2ನೇ ತರಗತಿ ಪಾಠ ಕೂಡಾ ಸರಿಯಾಗಿ ಓದೋಕೆ ಬರೋಲ್ಲವಂತೆ. ಅದಕ್ಕೂ ನಾಲಿಗೆ ತಡಬಡಾಯಿಸುತ್ತದೆ ಎಂದು ವರದಿ ಹೇಳಿದೆ. ಹೊಸದಿಲ್ಲಿ: 14-18 ವರ್ಷ ವಯಸ್ಸಿನವರಲ್ಲಿ ಕಾಲು ಭಾಗದಷ್ಟು ಗ್ರಾಮೀಣ ಮಕ್ಕಳಿಗೆ ಗ್ರೇಡ್ 2 ಹಂತದ ಪಠ್ಯವನ್ನು ಕೂಡಾ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ನಿರರ್ಗಳವಾಗಿ ಓದಲು ಸಾಧ್ಯವಿಲ್ಲ. ಇನ್ನು ಶೇ. 42.7% ರಷ್ಟು ಮಕ್ಕಳಿಗೆ ಇಂಗ್ಲಿಷ್‌ನಲ್ಲಿ ವಾಕ್ಯಗಳನ್ನು ಓದಲು ಸಾಧ್ಯವಿಲ್ಲ ಎಂಬ ಕಳವಳಕಾರಿ ವರದಿ ಹೊರ ಬಿದ್ದಿದೆ. ಇತ್ತೀಚಿನ ವಾರ್ಷಿಕ ಶಿಕ್ಷಣ ಸಮೀಕ್ಷೆ ವರದಿ( ) ಬುಧವಾರ ಬಿಡುಗಡೆಯಾಗಿದೆ. ಪ್ರಥಮ್ ಫೌಂಡೇಶನ್ ನೇತೃತ್ವದ 'ಬೇಸಿಕ್ಸ್ ಬಿಯಾಂಡ್' ಎಂಬ ಶೀರ್ಷಿಕೆಯ 2023 ವರದಿಯು, 28 ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದಾಖಲಾದ 14 ರಿಂದ 18 ವರ್ಷದ 34,745 ಗ್ರಾಮೀಣ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿದೆ. ವಿದ್ಯಾರ್ಥಿನಿಯರು (76%) ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಗ್ರೇಡ್ 2ನೇ ಹಂತದ ಪಠ್ಯವನ್ನು ಓದುವಲ್ಲಿ ವಿದ್ಯಾರ್ಥಿಗಳಿಗಿಂತ (70.9%) ಉತ್ತಮವಾಗಿದ್ದಾರೆ. ಅಂತೆಯೇ ಹುಡುಗರು ಅಂಕಗಣಿತದಲ್ಲಿ ಮತ್ತು ಇಂಗ್ಲಿಷ್ ಪಠ್ಯವನ್ನು ಓದುವಲ್ಲಿ ಹುಡುಗಿಯರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ವರದಿ ಕಂಡುಕೊಂಡಿದೆ. ಫೋನ್ ಮನರಂಜನೆಗೆ ಹೆಚ್ಚು ಬಳಕೆಸಮೀಕ್ಷೆಯು ವಿದ್ಯಾರ್ಥಿಗಳ ಡಿಜಿಟಲ್ ಜಾಗೃತಿಯನ್ನು ಸಹ ಮ್ಯಾಪ್ ಮಾಡಿದೆ. 90% ರಷ್ಟು ಯುವಕರು ಮನೆಯಲ್ಲಿ ಸ್ಮಾರ್ಟ್‌ಫೋನ್ ಹೊಂದಿದ್ದಾರೆ ಮತ್ತು ಅದನ್ನು ಹೇಗೆ ಬಳಸಬೇಕೆಂದು ತಿಳಿದಿರುತ್ತಾರೆ. ಈ ವಿಷಯದಲ್ಲಿ ಹುಡುಗರು ವಿದ್ಯಾರ್ಥಿನಿಯರಿಗಿಂತ ಮುಂದಿದ್ದಾರೆ. ಮೂರನೇ ಎರಡರಷ್ಟು ವಿದ್ಯಾರ್ಥಿಗಳು ಶಿಕ್ಷಣ ಸಂಬಂಧ ವಿಡಿಯೋ ವೀಕ್ಷಿಸಲು ಬಳಸಿದ್ದರೂ, ಶೇ.80ರಷ್ಟು ವಿದ್ಯಾರ್ಥಿಗಳು ಚಲನಚಿತ್ರ ಮತ್ತಿತ್ಯಾದಿ ಮನರಂಜನಾ ವಿಷಯಗಳಿಗಾಗಿ ಸ್ಮಾರ್ಟ್ ಫೋನ್ ಬಳಸಿದ್ದಾರೆ. ವರದಿಯ ಪ್ರಕಾರ, 14-18 ವರ್ಷ ವಯಸ್ಸಿನವರಲ್ಲಿ ಒಟ್ಟಾರೆ 86.8% ರಷ್ಟು ವಿದ್ಯಾರ್ಥಿಗಳು ಶಾಲೆ ಅಥವಾ ಕಾಲೇಜುಗಳಲ್ಲಿ ದಾಖಲಾಗಿದ್ದಾರೆ. ಆದರೆ ದಾಖಲಾತಿ ಶೇಕಡಾವಾರು ವಯಸ್ಸಿನೊಂದಿಗೆ ಇಳಿಕೆ ಕಂಡಿದೆ. ಉದಾಹರಣೆಗೆ, ಪ್ರಸ್ತುತ ಶಾಲೆ ಅಥವಾ ಕಾಲೇಜಿಗೆ ದಾಖಲಾಗದ ಯುವಕರ ಪ್ರಮಾಣವು 14 ವರ್ಷ ವಯಸ್ಸಿನ 3.9% ರಿಂದ, 16 ವರ್ಷ ವಯಸ್ಸಿನ 10.9% ಮತ್ತು 18 ವರ್ಷ ವಯಸ್ಸಿನವರಲ್ಲಿ 32.6% ಕ್ಕೆ ಏರುತ್ತದೆ ಎಂದು ವರದಿಯು ಹೈಲೈಟ್ ಮಾಡಿದೆ. ಜೀವನೋಪಾಯದ ಕಾರಣದಿಂದ ಬಹಳಷ್ಟು ಮಕ್ಕಳ ಪ್ರೌಢ ಶಿಕ್ಷಣ ಮತ್ತು ನಂತರದ ಹಂತಗಳು ಅಲ್ಲಿಯೇ ನಿಲ್ಲುತ್ತವೆ. ಅದಾಗ್ಯೂ ಈ ವಯಸ್ಸಿನ ವಿದ್ಯಾರ್ಥಿಗಳು ಶಾಲೆ ಮುಂದುವರೆಸಿದಾಗಲೂ ಅವರ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಕೌಶಲ್ಯಗಳಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲ ಎಂದು ವರದಿಯು ಹೈಲೈಟ್ ಮಾಡಿದೆ.