ನಿರ್ಗಮಿತ ಸಚಿವರಿಗೆ ರಾಷ್ಟ್ರಪತಿಗಳಿಂದ ಔತಣ
ನವದೆಹಲಿ,ಜೂ.೬- ೧೭ನೇ ಲೋಕಸಭೆಯ ಕೇಂದ್ರ ಸಚಿವ ಸಂಪುಟದ ನಿರ್ಗಮಿತ ಸಚಿವರಿಗೆ ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಔತಣ ಕೂಟ ಆಯೋಜಿಸಿದ್ದರು.
ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ಹಂಗಾಮಿ ಪ್ರಧಾನಿ ನರೇಂದ್ರ ಮೋದಿ,ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಕೇಂದ್ರ ಸಚಿವ ಸಂಪುಟದ ನಿರ್ಗಮಿತ ಸಚಿವರು ಭಾಗಿಯಾಗಿದ್ದರು
೫೪೩ ಸದಸ್ಯ ಬಲದ ಸದನದಲ್ಲಿ ಎನ್‌ಡಿಎ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ೨೪೦ ಸ್ಥಾನಗಳನ್ನು ಪಡೆದುಕೊಂಡಿದೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ೯೯ ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ
ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ ಅವರು ರಾಷ್ಟ್ರಪತಿ ದ್ರೌಪಧಿ ಮುರ್ಮು ಅವರಿಗೆ ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳ ನಂತರ ಔತಣಕೂಟ ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ ರಾಷ್ಟ್ರಪತಿಗಳು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಚಿವ ಸಂಪುಟದ ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದರು.
ಹೊಸ ಸರ್ಕಾರ ರಚನೆ ಆಗುವ ತನಕ ಹಂಗಾಮಿ ಪ್ರಧಾನಿಯಾಗಿ ಮುಂದುವರಿಯುವಂತೆ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪ್ರತಿಗಳು ಸೂಚಿಸಿದ್ದಾರೆ.
ನಿರ್ಗಮಿತ ಸಚಿವ ಸಂಪುಟಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ್ದ ಔತಣಕೂಟದ ಭಾವಚಿತ್ರಗಳನ್ನು ರಾಷ್ಟ್ರಪತಿ ಭವನ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಸಲಹೆಯ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ೧೭ ನೇ ಲೋಕಸಭೆಯನ್ನು ವಿಸರ್ಜಿಸಿದರು. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತುತ ಲೋಕಸಭೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸುವಂತೆ ರಾಷ್ಟ್ರಪತಿಗಳಿಗೆ ಸಲಹೆ ನೀಡಿದೆ ಎಂದು ಅದು ಹೇಳಿದೆ. ಪ್ರಸಕ್ತ ಲೋಕಸಭೆಯ ಅವಧಿ ಜೂನ್ ೧೬ಕ್ಕೆ ಕೊನೆಗೊಳ್ಳಬೇಕಿತ್ತು.
“ರಾಷ್ಟ್ರಪತಿ ಅವರು ಸಚಿವ ಸಂಪುಟದ ಸಲಹೆ ಸ್ವೀಕರಿಸಿದ್ದಾರೆ ಮತ್ತು ಸಂವಿಧಾನದ ೮೫ ನೇ ವಿಧಿಯ ಕಲಂ (೨) ರ ಉಪ-ಕಲಂ (ಬಿ) ಮೂಲಕ ಅವರಿಗೆ ನೀಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ ೧೭ ನೇ ಲೋಕಸಭೆಯನ್ನು ವಿಸರ್ಜಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. “ರಾಷ್ಟ್ರಪತಿ ಭವನ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ
ಪ್ರಧಾನಿ ನಿವಾಸದಲ್ಲಿ ನಡೆದ ಎನ್‌ಡಿಎ ಪಾಲುದಾರರ ಸಭೆಯಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು, ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್, ರಾಷ್ಟ್ರೀಯ ಲೋಕದಳದ ಜಯಂತ್ ಚೌಧರಿ, ಎಚ್‌ಡಿ ಕುಮಾರಸ್ವಾಮಿ ಭಾಗವಹಿಸಿದ್ದರು. , ಜಿತನ್ ರಾಮ್ ಮಾಂಝಿ, ಅನುಪ್ರಿಯಾ ಪಟೇಲ್, ಏಕನಾಥ್ ಶಿಂಧೆ ಜೊತೆಗೆ ಬಿಜೆಪಿಯ ಉನ್ನತ ನಾಯಕತ್ವದಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಮತ್ತು ಇತರರು ಇದ್ದರು.