ಹಣ ದಂಧೆಗೆ ಇಳಿದ ಪಾಕ್ ಕ್ರಿಕೆಟಿಗರು
ನ್ಯೂಯಾರ್ಕ್, ಜೂ.೫- ಟಿ೨೦ ವಿಶ್ವಕಪ್ ಆಡಲು ಬಂದಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಆಡುವುದನ್ನು ಬಿಟ್ಟು ಹಣ ಮಾಡುವ ದಂಧೆಗೆ ಇಳಿದು ವಿವಾದದಲ್ಲಿ ಸಿಲುಕಿದ್ದಾರೆ.
ಜೂ.೯ರಂದು ಭಾರತ – ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ಇದೆ. ಪಂದ್ಯಕ್ಕೆ ಸಜ್ಜಾಗಬೇಕಿರುವ ಪಾಕಿಸ್ತಾನ ತಂಡ ಪಾರ್ಟಿ ಮಾಡಲು ಮುಂದಾಗಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.
ಪಾಕ್ ಆಟಗಾರರು ತಮ್ಮ ಮೊದಲ ಪಂದ್ಯಕ್ಕೂ ಮುನ್ನ ನ್ಯೂಯಾರ್ಕ್‌ನ ಖಾಸಗಿ ಹೋಟೆಲ್‌ವೊಂದರಲ್ಲಿ ಔತಣಕೂಟ ಏರ್ಪಡಿಸಿದೆ.ಈ ಔತಣಕೂಟದಲ್ಲಿ ಅಭಿಮಾನಿಗಳಿಗೂ ಪಾಲ್ಗೊಳಲು ಅವಕಾಶ ನೀಡಲಾಗಿತ್ತು. ಪಾಲ್ಗೊಳಬೇಕಿದ್ದರೆ ೨೫ ಯುಎಸ್ ಡಾಲರ್ ಪಾವತಿಸಬೇಕಾಗಿತ್ತು.
ಅಂದರೆ ಪಾಕಿಸ್ತಾನ ತಂಡ ಔತಣಕೂಟ ಏರ್ಪಡಿಸಿ ಅದಕ್ಕೆ ಟಿಕೆಟ್ ನಿಗದಿ ಮಾಡಿದ್ದಾರೆ. ಬಂದ ಹಣವನ್ನು ಆಟಗಾರರು ಹಂಚಿಕೊಳ್ಳಲು ಮುಂದಾಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಪಾಕ್ ಕ್ರಿಕೆಟ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ತಂಡದ ಆಟಗಾರರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಈ ಐಡಿಯಾ ಕೊಟ್ಟ ಆಟಗಾರ ಯಾರೆಂದು ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಪ್ರಶ್ನಿಸಿದ್ದಾರೆ.
ಆಟಗಾರರನ್ನು ಭೇಟಿಯಾಗಲು ೨೫ ಯುಎಸ್ ಡಾಲರ್ ನಿಗದಿ ಮಾಡಿದ್ದು ನಾಚಿಕೆಗೇಡಿನ ಸಂಗತಿ. ದೇಶದ ಹೆಸರಲ್ಲಿ ಹೀಗೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.