ದೇಶದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ಯುಗ
ನವದೆಹಲಿ, ಜೂ.೫- ದೇಶದಲ್ಲಿ ಕಳೆದ ಹತ್ತು ವರ್ಷಗಳ ಬಳಿಕ ಸಮಿಶ್ರ ಸರ್ಕಾರದ ಯುಗ ಆರಂಭವಾಗಿದೆ. ಹೀಗಾಗಿ ಮುಂದಿನ ಐದು ವರ್ಷಗಳ ಕಾಲ ಆಡಳಿತಾರೂಢ ಸರ್ಕಾದ ಚುಕ್ಕಾಣಿ ಹಿಡಿಯುವವರು ಮಿತ್ರ ಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯುವುದು ಅನಿವಾರ್ಯವಾಗಿದೆ.
ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದ ೭೩ ವರ್ಷಗಳ ಅವಧಿಯಲ್ಲಿ ದೇಶ ೩೨ ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರದ ಅವಧಿಗೆ ಸಾಕ್ಷಿಯಾಗಿತ್ತು. ಇದೀಗ ದೇಶದಲ್ಲಿ ಹೊಸ ಸರ್ಕಾರದ ಚುಕ್ಕಾಣಿ ಹಿಡಿಯುವ ನಾಯಕ, ಮಿತ್ರ ಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯುವುದು ಮತ್ತು ಅವರು ಹೇಳಿದ ಹಾಗೆ ಕೇಳುವ ಅಗತ್ಯ ಮತ್ತು ಅನಿವಾರ್ಯತೆ ಸೃಷ್ಟಿಯಾಗಿದೆ.
ದೇಶದಲ್ಲಿ ೧೦ ವರ್ಷಗಳ ಬಹುಮತದ ಸರ್ಕಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರನೇ ಅವಧಿ ತಂತಿಯ ಮೇಲೆ ನಡೆಯುವ ಸ್ಥಿತಿಯನ್ನು ದೇಶದ ಜನರು ನಿರ್ಮಿಸಿದ್ದಾರೆ. ನಾಯಕರ ತೀರ್ಪಿಗಿಂತ ಜನರ ತೀರ್ಪೆ ಅಂತಿಮ ಎನ್ನುವುದನ್ನು ದೇಶದ ಮತದಾರ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ರಚಿಸಿದ ’ಸಮ್ಮಿಶ್ರ ಧರ್ಮ ಎಂಬ ಪದವನ್ನು ಅನಿವಾರ್ಯವಾಗಿ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಚಾಚೂ ತಪ್ಪದೆ ಪಾಲಿಸುವ ಅಗತ್ಯ ಎದುರಾಗಿದೆ. ದೇಶದ ರಾಜಕೀಯ ಇತಿಹಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿ ಇರುವ ತನಕ ಸಮ್ಮಿಶ್ರ ಸರ್ಕಾರ ಬರುವುದಿಲ್ಲ ಎಂದು ಬೀಗುತ್ತಿದ್ದ ಬಿಜೆಪಿ ನಾಯಕರಿಗೆ ದೇಶದ ಜನರು ಮುಟ್ಟು ನೋಡಿಕೊಳ್ಳುವಂತೆ ತೀರ್ಪು ನೀಡಿದ್ದಾರೆ.
ಮೂರು ದಶಕಗಳಿಂದ ಜನರು ವಿಭಜಿತ ಜನಾದೇಶ ನೀಡುತ್ತಿರುವ ಭಾರತದಲ್ಲಿ, ಸಮ್ಮಿಶ್ರ ರಾಜಕಾರಣ ರೂಢಿಯಲ್ಲಿದೆ. ೮೦, ೯೦ ರ ದಶಕಗಳಲ್ಲಿ ಮತ್ತು ಈ ಶತಮಾನದ ಮೊದಲ ದಶಕದಲ್ಲಿ ಯಾವುದೇ ಪಕ್ಷ ಲೋಕಸಭೆಯಲ್ಲಿ ಬಹುಮತ ಪಡೆದಿರಲಿಲ್ಲ, ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಹಿಡಿದ ಮೊದಲ ಮತ್ತು ಎರಡನೇ ಅವಧಿಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡಿ ಸುಭದ್ರ ಸರ್ಕಾರಕ್ಕೆ ಮುನ್ನುಡಿ ಬರೆದಿದ್ದರು. ಈ ಬಾರಿ ಮತದಾರ ಉಲ್ಟಾ ಹೊಡೆದಿದ್ದಾನೆ.
ಮೋದಿಗೆ ಅಗ್ನಿಪರೀಕ್ಷೆ
ಗುಜರಾತಿನಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ದಿನದಿಂದ ಯಾವತ್ತೂ ಸಮ್ಮಿಶ್ರ ಸರ್ಕಾರ ನಡೆಸಿದ ಅನುಭವ ಇಲ್ಲದ ಪ್ರಧಾನಿ ನರೇಂದ್ರ ಮೋದಿ ಇದೀಗ ಸಮ್ಮಿಶ್ರ ಸರ್ಕಾರ ನಡೆಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಬಿಜೆಪಿ ೨೪೦ ಸ್ಥಾನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಮಾಜಿಕ್ ಸಂಖ್ಯೆ ೨೭೨ ಅನ್ನು ದಾಟಲು ವಿಫಲವಾಗಿದೆ. ಕೇಂದ್ರದಲ್ಲಿ ಸರ್ಕಾರ ನಡೆಸಲು ಎನ್‌ಡಿಎ ಮಿತ್ರಪಕ್ಷಗಳ ಬೆಂಬಲ ಬೇಕಾಗುತ್ತದೆ.
ಅಟಲ್ ಬಿಹಾರಿ ವಾಜಪೇಯಿ ಅವರು ಕೋಪಗೊಂಡ ಮಮತಾ ಬ್ಯಾನರ್ಜಿಯನ್ನು ಹೇಗೆ ನಿರ್ವಹಿಸಿದರು ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಕಲಿಯುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ.
೩೨ ವರ್ಷ ಸಮ್ಮಿಶ್ರ ಆಡಳಿತ
ದೇಶದ ೭೩ ವರ್ಷಗಳ ಚುನಾವಣಾ ಇತಿಹಾಸದಲ್ಲಿ, ೧೯೫೧ ರಿಂದ ಮೊದಲ ಚುನಾವಣೆಗಳು ನಡೆದಾಗ, ದೇಶ ೩೨ ವರ್ಷಗಳ ಸಮ್ಮಿಶ್ರ ಸರ್ಕಾರದ ಆಡಳಿತ ನಡೆಸಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ೧೦ ವರ್ಷಗಳು ಸೇರಿದಂತೆ ೩೧ ವರ್ಷಗಳ ಬಹುಮತದ ಸರ್ಕಾರ ನೋಡಿತ್ತು. ಇದೀಗ ಮತ್ತೆ ಸಮ್ಮಿಶ್ರ ಸರ್ಕಾರದ ಯುವ ಆರಂಭವಾಗಿದೆ.
೧೯೭೭ ರಲ್ಲಿ ತುರ್ತು ಪರಿಸ್ಥಿತಿಯ ನಂತರ ಪಕ್ಷಗಳು ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದ್ದವು. ರೈತ ನಾಯಕ ಚರಣ್ ಸಿಂಗ್ ನಂತರ ಇಂದಿರಾ ಗಾಂಧಿಯವರ ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಧಾನಿಯಾಗಿ ಮೊದಲ ಬಾರಿಗೆ ರಚನೆ ಆಗಿತ್ತು. ಅಲ್ಲಿಂದ ಈವರೆಗೆ ೩೨ ವರ್ಷ ಸಮ್ಮಿಶ್ರ ಸರ್ಕಾರ ನಡೆಸಿರುವುದಕ್ಕೆ ಅನುಭವ ದೇಶ ಸಾಕ್ಷಿಯಾಗಿದೆ.