೯ ಫೋನ್‌ಗಳಲ್ಲಿದ್ದ ಸಾಕ್ಷಿ ನಾಶಪಡಿಸಿದ ಕವಿತಾ
ನವದೆಹಲಿ.ಜೂ.೪: ದೆಹಲಿ ಮದ್ಯ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಬಿಆರ್‌ಎಸ್ ಶಾಸಕಿ ಕೆ.ಕವಿತಾ, ಪ್ರಕರಣದ ಸಾಕ್ಷ್ಯಾಧಾರಗಳಿದ್ದ ೯ ಫೋನ್‌ಗಳನ್ನು ನಾಶ ಮಾಡಿದ್ದರು. ಜೊತೆಗೆ ೧೦ ಲಕ್ಷ ರೂ. ಮೌಲ್ಯದ ಸ್ಟಾರ್ ಹೋಟೆಲ್‌ನಲ್ಲಿ ರೂಮ್ ಬುಕ್‌ಮಾಡಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಉಳಿದಂತೆ ಕವಿತಾ ಅವರು ಈ ಹಿಂದೆಯೇ ದೆಹಲಿಯಲ್ಲಿ ಆಡಳಿತಾರೂಢ ಆಪ್ ಪಕ್ಷಕ್ಕೆ ಮದ್ಯದ ಪರವಾನಿಗೆಗೆ ಬದಲಾಗಿ ೧೦೦ ಕೋಟಿ ರೂ. ಪಾವತಿಸಲು ಸೌತ್ ಗ್ರೂಪ್ ಜೊತೆಗೂಡಿ ಪಿತೂರಿ ನಡೆಸಿದ್ದಾರೆ. ಜೊತೆಗೆ ಇಂಡೋ ಸ್ಪೀರಿಟ್‌ನ ಸ್ಟಾಕ್‌ನಲ್ಲಿ ಪಾಲನ್ನು ಧೀನಪಡಿಸಿಕೊಳ್ಳಲು ಸಂಚು ಹೂಡಿದ್ದರು. ಒಟ್ಟಾರೆ ಅಬಕಾರಿ ನೀತಿ ರದ್ದಾಗುವುದಕ್ಕೆ ಮುನ್ನ ೧೯೨. ೮ ಕೋಟಿ ರೂ.ಗಳಷ್ಟು ಲಾಭ ಗಳಿಸಿದ್ದಾರೆ ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ.
ವಿವಿಧ ರೂಪದಲ್ಲಿ ಪಡೆದ ೧೦೦ ಕೋಟಿ ರೂ. ಕಿಕ್‌ಬ್ಯಾಕ್ ಹಣವನ್ನ ಅಕ್ರಮ ಮಾರ್ಗಗಳ ಮೂಲಕ ಗೋವಾಕ್ಕೆ ಆಪ್ ಚುನಾವಣೆಗೆ ವರ್ಗಾವಣೆ ಮಾಡಲಾಗಿದೆ. ಕವಿತಾ ಮತ್ತು ಸಮೀರ್ ಮಹೇಂದ್ರು ಸೇರಿದಂತೆ ಇತರ ಸೌತ್ ಗ್ರೂಪ್ ಸದಸ್ಯರು ತಮ್ಮ ಈ ಅವ್ಯವಹಾರದ ಅಪರಾಧ ಮುಚ್ಚಿ ಹಾಕಲು ಎಲ್‌ಎನ್‌ಡೋ ಸ್ಪಿರಿಟ್ಸ್ ರಚನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂಬ ಅಚ್ಚರಿ ಸಂಗತಿಗಳನ್ನೂ ಇಡಿ ತೆರೆದಿಟ್ಟಿದೆ.
ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿ ಒಟ್ಟು ೧೮ ಮಂದಿಯನ್ನು ಇಡಿ ಬಂಧಿಸಿದೆ.