ಸರ್ಕಾರ ರಚನೆಗೆ ಎನ್‌ಡಿಎ ಕಸರತ್ತು
ನವದೆಹಲಿ,ಜೂ.೪:ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯುವಲ್ಲಿ ವಿಫಲವಾಗಿದ್ದರೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸುವಷ್ಟು ಬಹುಮತ ಪಡೆದಿದೆ.ಎನ್‌ಡಿಎಗೆ ತೀವ್ರ ಪೈಪೋಟಿ ನೀಡಿರುವ ಇಂಡಿಯಾ ಮೈತ್ರಿಕೂಟ ಸಹ ಬಹುಮತದ ಆಸುಪಾಸಿನಲ್ಲಿದ್ದು, ಎನ್‌ಡಿಎ ಮೈತ್ರಿಕೂಟದಲ್ಲಿರುವ ಬಿಜೆಪಿಯೇತರ ಪಕ್ಷಗಳನ್ನು ಸೆಳೆದು ಸರ್ಕಾರ ರಚಿಸುವ ಕಸರತ್ತು ನಡೆಸಿದೆ.ಕಳೆದ ಚುನಾವಣೆಯಲ್ಲಿ ೩೦೩ ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿದ್ದ ಬಿಜೆಪಿ, ಈ ಬಾರಿ ಬಹುಮತ ಪಡೆಯಲು ಸಾಧ್ಯವಾಗದಿದ್ದರೂ ಎನ್‌ಡಿಎ ಮೈತ್ರಿಕೂಟದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಸರ್ಕಾರ ರಚನೆಗೆ ಮಿತ್ರ ಪಕ್ಷಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿಗೆ ಬಂದಿದೆ.ನರೇಂದ್ರಮೋದಿ ಅವರು ಮತ್ತೆ ದೇಶದ ಪ್ರಧಾನಿ ಹುದ್ದೆಗೆ ಅಲಂಕರಿಸುವುದು ಈಗ ಎನ್‌ಡಿಎನಲ್ಲಿರುವ ಬಿಜೆಪಿಯೇತರ ಪಕ್ಷಗಳ ನಿಲುವು ನಿರ್ಧಾರಗಳ ಮೇಲೆ ನಿಂತಿದೆ. ಎನ್‌ಡಿಎ ಮಿತ್ರ ಪಕ್ಷಗಳು ಗಟ್ಟಿಯಾಗಿ ಮೋದಿ ಬೆಂಬಲಕ್ಕೆ ನಿಂತರೆ ಮೋದಿ ಅವರು ೩ನೇ ಬಾರಿಗೆ ಪ್ರಧಾನಿಯಾಗುವುದು ಗ್ಯಾರಂಟಿ.ಒಂದು ವೇಳೆ ಮಿತ್ರ ಪಕ್ಷಗಳು ಕೈ ಕೊಟ್ಟರೆ ದೇಶದ ರಾಜಕೀಯದಲ್ಲಿ ಮತ್ತೆ ಸರ್ಕಾರ ರಚನೆಯ ಚದುರಂಗದಾಟ ಆರಂಭವಾಗಲಿದೆ.ಎನ್‌ಡಿಎ ಮೈತ್ರಿಕೂಟಕ್ಕೆ ಪ್ರಬಲ ಪೈಪೋಟಿ ನೀಡಿರುವ ಇಂಡಿಯಾ ಮೈತ್ರಿಕೂಟ ಬಹುಮತಕ್ಕೆ ಕೆಲವು ಸ್ಥಾನಗಳಷ್ಟು ಕೊರತೆ ಬಿದ್ದಿದೆ. ಇಂಡಿಯಾ ಮೈತ್ರಿಕೂಟದ ನಾಯಕರುಗಳು ಎನ್‌ಡಿಎನಲ್ಲಿರುವ ತೆಲುಗುದೇಶಂ ಜೆಡಿಯು ಪಕ್ಷಗಳಿಗೆ ಗಾಳ ಹಾಕಿದ್ದು,ಇದಕ್ಕೆ ತೆಲುಗು ದೇಶಂಮತ್ತು ಜೆಡಿಯು ನಾಯಕರುಗಳು ಸೊಪ್ಪು ಹಾಕುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.ಒಂದು ವೇಳೆ ತೆಲುಗುದೇಶಂ, ಜೆಡಿಯು ಮತ್ತಿತರ ಮಿತ್ರ ಪಕ್ಷಗಳು ಎನ್‌ಡಿಎಯಿಂದ ಹೊರಬಂದು ಇಂಡಿಯಾ ಒಕ್ಕೂಟಕ್ಕೆ ಬೆಂಬಲನೀಡಿದರೆ ಎನ್‌ಡಿಎಗೆ ಸರ್ಕಾರ ರಚನೆ ಕಷ್ಟವಾಗಬಹುದು.ಈ ಚುನಾವಣೆಯಲ್ಲಿ ಏಕಾಂಗಿಯಾಗಿ ೩೫೦ ಸ್ಥಾನಗಳನ್ನು ಗೆದ್ದು ಒಟ್ಟಾರೆ ಎನ್‌ಡಿಎ ೪೦೦ ಸ್ಥಾನಗಳನ್ನು ದಾಟಲಿದೆ ಎಂಬ ಬಿಜೆಪಿಯ ನಿರೀಕ್ಷೆ ಹುಸಿಯಾಗಿದ್ದು, ಬಹುಮತಕ್ಕೆ ಅಗತ್ಯವಾದ ೨೭೨ ಸಂಖ್ಯಾಬಲವನ್ನು ತಲುಪಲು ಬಿಜೆಪಿಗೆ ಸಾಧ್ಯವಾಗಿಲ್ಲ.ಮೋದಿ ಅವರು ಮತ್ತೆ ಪ್ರಧಾನಿ ಹುದ್ದೆಗೆ ಏರುವುದು ಈಗ ಬಿಜೆಪಿಯಲ್ಲಿರುವ ಮಿತ್ರ ಪಕ್ಷಗಳ ತೀರ್ಮಾನದ ಮೇಲೆ ನಿಂತಿದೆ.ಈ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಬಲ ಗಣನೀಯವಾಗಿ ಹೆಚ್ಚಿದೆ. ಅದರಲ್ಲೂ ಕಾಂಗ್ರೆಸ್‌ನ ಬಲ ಕಳೆದ ಬಾರಿಗಿಂತ ದ್ವಿಗುಣಗೊಂಡಿದೆ. ಇಂಡಿಯಾ ಮೈತ್ರಿಕೂಟದ ಸಂಖ್ಯಾಬಲ ಎನ್‌ಡಿಎಗೆ ಎಚ್ಚರಿಕೆಯ ಗಂಟೆಯಾಗಿದೆ.ಈ ಚುನಾವಣೆಯಲ್ಲಿ ಬಿಜೆಪಿಯ ಬಲ ಕುಸಿದಿರುವುದಕ್ಕೆ ಆಡಳಿತ ವಿರೋಧಿ ಅಲೆಯೂ ಸ್ವಲ್ಪಮಟ್ಟಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ನರೇಂದ್ರಮೋದಿ ಅವರ ನಾಮಬಲ ವರ್ಚಸ್ಸಿನಿಂದ ಬಿಜೆಪಿ ಇಷ್ಟು ದೊಡ್ಡಮಟ್ಟದಲ್ಲಿ ಗೆಲುವು ಸಾಧಿಸಲು ಕಾರಣವಾಗಿದೆ.ಮೋದಿ ಹೆಸರಿನ ಶ್ರೀ ರಕ್ಷೆ ಇಲ್ಲದಿದ್ದರೆ ಬಿಜೆಪಿಯ ಸ್ಥಿತಿ ಮತ್ತಷ್ಟು ಕಳವಳಕಾರಿಯಾಗುತ್ತಿತ್ತು ಎಂದು ಅಂದಾಜಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಉತ್ತರ ಪ್ರದೇಶದಲ್ಲಿ ಪ್ರಬಲವಾದ ಆಡಳಿತ ವಿರೋಧಿ ಅಲೆ ಬೀಸಿದ್ದು,ಇಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗಿಂತ ಇಂಡಿಯಾ ಒಕ್ಕೂಟ ಹೆಚ್ಚಿನ ಸ್ಥಾನ ಗೆದ್ದಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಆಗಿರುವ ಹಿನ್ನೆಡೆಯಿಂದ ಬಿಜೆಪಿ ಬಹುಮತ ಗಳಿಸಲು ಸಾಧ್ಯವಾಗಿಲ್ಲ.ಉಳಿದಂತೆ ಮಧ್ಯಪ್ರದೇಶ, ಉತ್ತರಾಖಂಡದಲ್ಲ್ಲಿ ಬಿಜೆಪಿ ಕ್ಲೀನ್‌ಸ್ವಿಪ್ ಮಾಡಿದೆ. ಗುಜರಾತ್-ಛತ್ತೀಸ್‌ಘಡದಲ್ಲೂ ಎನ್‌ಡಿಎ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಬಿಹಾರದಲ್ಲೂ ಎನ್‌ಡಿಎ ಹೆಚ್ಚು ಸ್ಥಾನಗಳನ್ನು ಗೆದ್ದಿದೆ.ರಾಜಸ್ತಾನ ಛತ್ತೀಸ್‌ಘಡದಲ್ಲೂ ನಿರೀಕ್ಷೆಯಷ್ಟು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಉಳಿದಂತೆ ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ವಿಫಲವಾಗಿದ್ದು, ತಮಿಳುನಾಡಿನಲ್ಲೂ ಖಾತೆ ತೆರೆಯಲು ವಿಫಲವಾಗಿದೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲೂ ಬಿಜೆಪಿ ಕಾಂಗ್ರೆಸ್‌ಗಿಂತ ಹೆಚ್ಚಿನ ಸ್ಥಾನ ಗೆದ್ದಿದೆ. ಹಾಗೆಯೇ ತೆಲಂಗಾಣದಲ್ಲೂ ಬಿಜೆಪಿ ಸಾಧನೆ ಕಾಂಗ್ರೆಸ್‌ಗೆ ಸರಿಸಮನಾಗಿದ್ದು, ಇಲ್ಲೂ ಬಿಜೆಪಿ ಕಾಂಗ್ರೆಸ್‌ನಷ್ಟೆ ಸ್ಥಾನ ಗೆದ್ದಿದೆ. ಕೇರಳದಲ್ಲೂ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಪಂಜಾಬ್‌ನಲ್ಲೂ ಎನ್‌ಡಿಎ ಖಾತೆ ತೆರೆಯಲು ವಿಫಲವಾಗಿದೆ.ಇಂಡಿಯಾ ಒಕ್ಕೂಟ ಉತ್ತರ ಪ್ರದೇಶ, ಮಹಾರಾಷ್ಟ್ರ, .ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳಗಳಲ್ಲಿ ಹೆಚ್ಚಿನ ಸ್ಥಾನ ಗೆದ್ದಿದೆ.