ಪೋರ್ಶೆ ಕಾರು ಅಪಘಾತ : ತಾಯಿ ಬಂಧನ
ಮುಂಬಯಿ(ಮಹಾರಾಷ್ಟ್ರ),ಜೂ.೧-ಪೋರ್ಶೆ ಕಾರು ಡಿಕ್ಕಿ ಹೊಡೆದು ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್ ಗಳು ಮೃತಪಟ್ಟ ಪ್ರಕರಣದ ಸಂಬಂಧ ಕಾರು ಚಲಾಯಿಸಿದ್ದ ಆರೋಪಿ ಅಪ್ರಾಪ್ತನ ತಾಯಿಯನ್ನು ಪುಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಅಪಘಾತ ಸಂಭವಿಸಿದಾಗ ತನ್ನ ಮಗ ಮದ್ಯಪಾನ ಮಾಡಿರಲಿಲ್ಲ ಎಂದು ಸಾಬೀತುಪಡಿಸಲು ಆರೋಪಿ ತಾಯಿ ತನ್ನ ರಕ್ತದ ಮಾದರಿಯನ್ನು ಬದಲಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತನ ರಕ್ತದ ಮಾದರಿ ಬದಲಿಗೆ ಆತನ ತಾಯಿಯ ರಕ್ತದ ಮಾದರಿಯನ್ನು ಪರೀಕ್ಷೆ ವೇಳೆ ಬದಲಾಯಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದ ಕೂಡಲೇ ತಾಯಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ.
ಕಳೆದ ಮೇ.೧೯ ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಅಪ್ರಾಪ್ತ ಪಾನಮತ್ತರಾಗಿ ಪೋರ್ಶೆ ಕಾರು ಚಲಾಯಿಸಿದ ಕಾರಣ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು. ಅಪ್ರಾಪ್ತನ ಕುಟುಂಬದ ಚಾಲಕನನ್ನು ಅಪಹರಿಸಿ ತಾನೇ ತಪ್ಪು ಒಪ್ಪಿಕೊಳ್ಳುವಂತೆ ಆಮಿಷ ಒಡ್ಡಲಾಗಿತ್ತು. ಈ ಆರೋಪದಲ್ಲಿ ಈಗಾಗಲೇ ಬಾಲಕನ ತಂದೆ ಮತ್ತು ತಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಪರಾಧವನ್ನು ಮುಚ್ಚಿಡಲು ಪ್ರಭಾವಿ ಕುಟುಂಬ ನಡೆಸಿದ ಪ್ರಯತ್ನಗಳು ತನಿಖೆಯಿಂದ ತಿಳಿದುಬಂದಿದೆ. ಸರ್ಕಾರಿ ಸ್ವಾಮ್ಯದ ಸಸೂನ್ ಆಸ್ಪತ್ರೆಯಲ್ಲಿ ಅಪ್ರಾಪ್ತನ ವೈದ್ಯಕೀಯ ಪರೀಕ್ಷೆಯಲ್ಲೂ ಅಕ್ರಮಗಳು ನಡೆದಿವೆ.