ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ: ಸಿಎಂ ಹೊಣೆ ಹೊರಲಿ
ಬೆಂಗಳೂರು, ಜೂ. ೩-ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಅವ್ಯವಹಾರದ ನೇರ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೊರಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಹಗರಣದಲ್ಲಿ ಸಚಿವ ನಾಗೇಂದ್ರರವರ ಮೇಲೆ ಮಾತ್ರ ಏಕೆ ಹೇಳಬೇಕು, ಅವರ ಮೇಲೆ ಇದನ್ನು ಹೊರಿಸುವುದಲ್ಲ. ಆರ್ಥಿಕ ಇಲಾಖೆ ಯಾರ ಕೈಯಲ್ಲಿದೆ, ತೆಲಂಗಾಣ ಚುನಾವಣೆಗೆ ಹಣ ತೆಗೆದುಕೊಂಡು ಹೋಗಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಸಚಿವರ ಹೆಸರು ಬರೆದಿಲ್ಲ, ಯಾವ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ, ೩೦ ಸಚಿವರಿದ್ದಾರೆ. ಎಲ್ಲಾ ನಿಗಮಗಳಲ್ಲೂ ಈ ರೀತಿ ನಡೆದಿದೆ ಎಂಬ ಸುದ್ದಿ ಇದೆ. ಹಣಕಾಸು ಖಾತೆ ನಿರ್ವಹಣೆ ಹೊತ್ತಿರುವ ಮುಖ್ಯಮಂತ್ರಿಗಳೇ ಇದರ ಹೊಣೆ ಹೊರಬೇಕು ಎಂದು ಹೇಳಿದರು.
ಈ ಹಗರಣದಲ್ಲಿ ಯೂನಿಯನ್ ಬ್ಯಾಂಕ್ ಸಹ ಇರುವುದರಿಂದ ತನಿಖೆ ಸಿಬಿಐ ವ್ಯಾಪ್ತಿಗೆ ಬರುತ್ತದೆ. ಆದರೆ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಎಸ್‌ಐಟಿ ಇದ್ದರೆ ಫೈಲ್ ಸುಟ್ಟು ಹಾಕಬಹುದೆಂದು ಇರಬಹುದು. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಮನೆಯಿಂದ ಪೆನ್‌ಡ್ರೈವ್, ಲ್ಯಾಪ್‌ಟಾಪ್ ತೆಗೆದುಕೊಂಡು ಹೋಗಿದ್ದಾರಲ್ಲಾ, ಅದು ಎಲ್ಲಿದೆ ಎಂದು ಪ್ರಶ್ನಿಸಿದರು.ನಾನು ಈ ಪ್ರಕರಣದಲ್ಲಿ ಸಚಿವ ನಾಗೇಂದ್ರ ಒಬ್ಬರನ್ನು ಎಳೆದು ತರುವುದಿಲ್ಲ. ಇದರಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಹ ಭಾಗಿಯಾಗಿರಬಹುದು. ಸರಿಯಾದ ತನಿಖೆಯಾದರೆ ಎಲ್ಲಾ ಹೊರಗೆ ಬರುತ್ತದೆ ಎಂದು ಹೇಳಿದರು.
ಕೆಆರ್‌ಡಿಎಲ್‌ನಲ್ಲೂ ಅಕ್ರಮ ಆಗಿದೆ. ಈ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಲ್ಲ. ಕಾಂಗ್ರೆಸ್ ಹೈಕಮಾಂಡ್‌ನ ಸೂಚನೆ ಮೇರೆಗೆ ಈ ಅಕ್ರಮಗಳು ನಡೆದಿವೆ ಎಂದು ಹೇಳಿದರು.ತೆಲಂಗಾಣ ಚುನಾವಣೆ ಜವಾಬ್ದಾರಿ ಯಾರು ಯಾರು ವಹಿಸಿಕೊಂಡಿದ್ದರೋ ಅವರು ಇಲ್ಲಿಂದ ಲೂಟಿ ಮಾಡಿ ಹಣ ಕಳುಹಿಸಿದ್ದಾರೆ. ಯಾರೋ ಹಣ ತಿಂದು ಇನ್ನೊಬ್ಬರ ಹೆಗಲಿಗೆ ವಹಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣನವರು ವಿದೇಶದಿಂದ ಬಂದು ತನಿಖೆ ಎದುರಿಸುವಂತೆ ನಾನು ಮನವಿ ಮಾಡಿದ್ದೆ. ಮಾಜಿ ಪ್ರಧಾನಿ ದೇವೇಗೌಡರು ಎಚ್ಚರಿಕೆ ನೀಡಿದ್ದರು. ಈಗ ಅವರು ಬಂದು ತನಿಖೆ ಎದುರಿಸುತ್ತಿದ್ದಾರೆ. ಅವರು ಚುನಾವಣೆಯಲ್ಲಿ ಗೆದ್ದ ಮೇಲೆ ಏನೆಂದು ನೋಡೋಣ. ಸದ್ಯ ಈ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದರು.
ಭವಾನಿ ರೇವಣ್ಣನವರಿಗೆ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಪ್ರಕಾರ ನೋಟಿಸ್ ಕೊಟ್ಟಿದ್ದಾರೆ. ಆ ಬಗ್ಗೆ ನಾನು ಮಾತನಾಡಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಇಡೀ ದೇಶದಲ್ಲೇ ಎನ್‌ಡಿಎ ಅಭ್ಯರ್ಥಿಗಳ ಪರ ಅಲೆಯಿದೆ. ರಾಜ್ಯದಲ್ಲೂ ನಾವು ೨೫ ಸೀಟು ಗೆಲ್ಲುತ್ತೇವೆ. ಮತಗಟ್ಟೆ ಸಮೀಕ್ಷೆಯೂ ಅದನ್ನೇ ಹೇಳಿದೆ. ಮೂರನೇ ಬಾರಿಗೆ ಮೋದಿಯವರು ಪ್ರಧಾನಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಜೆಡಿಎಸ್ ಸಹ ರಾಜ್ಯದಲ್ಲಿ ಮೂರು ಸ್ಥಾನ ಗೆಲ್ಲಲಿದೆ ಎಂದು ಕುಮಾರಸ್ವಾಮಿ ಹೇಳಿದರು.