ಜೂ.6ರವರೆಗೂ ಪ್ರಜ್ವಲ್ ರೇವಣ್ಣ ಎಸ್ಐಟಿ ವಶಕ್ಕೆ
ಬೆಂಗಳೂರು, ಮೇ.31-ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೂ.6ರವರೆಗೂ ಎಸ್ಐಟಿ ವಶಕ್ಕೆ ನೀಡಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ತಡರಾತ್ರಿ ವಿದೇಶದಿಂದ ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಎಸ್ಐಟಿ ಅಧಿಕಾರಿಗಳು ಅವರನ್ನು ಬಂಧಿಸಿ ಕೋರ್ಟ್ಗೆ ಹಾಜರು ಪಡಿಸಿದ್ದರು. ಆನಂತರ, ವಾದ ಮಂಡಿಸಿದ್ದ ಎಸ್ಐಟಿ ಪರ ವಕೀಲರು 15 ದಿನ ವಶಕ್ಕೆ ನೀಡಬೇಕೆಂದು ಮನವಿ ಮಾಡಿದ್ದರು.
ಇನ್ನೊಂದೆಡೆ ಕೇವಲ ಒಂದು ದಿನ ಎಸ್ಐಟಿ ವಶಕ್ಕೆ ನೀಡಿದರೆ, ಸಾಕು ಎಂದು ಪ್ರಜ್ವಲ್ ಪರ ವಕೀಲರು ವಾದ ಮಂಡಿಸಿದ್ದರು. ಅಂತಿಮವಾಗಿ ಕೋರ್ಟ್ ಆರು ದಿನ ಎಸ್ಐಟಿ ವಶಕ್ಕೆ ಒಪ್ಪಿಸಿದೆ. ಇದೇ ವೇಳೆ, ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡಬೇಕೆಂದು ಪ್ರಜ್ವಲ್ ಪರ ವಕೀಲರು ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ಎಸ್ಐಟಿ ಪರ ವಕೀಲ ಅಶೋಕ್ ನಾಯಕ್ ತಮ್ಮ ವಾದ ಮಂಡಿಸಿ, ಆರೋಪಿಯ ಮೊಬೈಲ್ ಮಾತ್ರ ಸಿಕ್ಕಿದೆ. ಅದರಲ್ಲಿ ಫೇಸ್ ಲಾಕ್ ಅಳವಡಿಸಲಾಗಿದೆ. ಇವರೊಬ್ಬ ವಿಕೃತಕಾಮಿಯಾಗಿದ್ದು, ಪ್ರಕರಣ ಬೆಳಕಿಗೆ ಬಂದ ತಕ್ಷಣ ತನಿಖೆಯಿಂದ ತಪ್ಪಿಸಿಕೊಳ್ಳಲು ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಆದರೆ, ವಿದೇಶಕ್ಕೆ ಪ್ರವಾಸಕ್ಕೆ ಹೋಗಿರುವುದಾಗಿ ಹೇಳಿದ್ದರು. ಈ ಹಿಂದೆ ಭಾರತಕ್ಕೆ ಬರಲು ಟಿಕೆಟ್ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಾರೆ. ಇನ್ನೇನು ವಿದೇಶದಲ್ಲಿ ಬಂಧಿಸುತ್ತಾರೆ ಎಂಬ ಅಂಶ ಗೊತ್ತಾದ ಹಿನ್ನೆಲೆಯಲ್ಲಿ ದೇಶಕ್ಕೆ ವಾಪಸ್ ಆಗಿದ್ದಾರೆ. ಆದ್ದರಿಂದ ಎಸ್ಐಟಿ ವಶಕ್ಕೆ ನೀಡಬೇಕು. ಈ ಆರೋಪ ಜೀವಾವಧಿ ಶಿಕ್ಷೆ ನೀಡುವಂತಾಗಿದೆ ಎಂದರು.
ಪ್ರಜ್ವಲ್ ಪರ ವಕೀಲ ಜಿ.ಅರುಣ್ ಪ್ರತಿವಾದ ಮಂಡಿಸಿ, ಆರೋಪಿ ವಿರುದ್ಧ ದಾಖಲಾಗಿರುವ ಪ್ರಕರಣ ನಾಲ್ಕು ವರ್ಷದ ಹಿಂದಿನದ್ದಾಗಿದೆ. ಇದು ಜಾಮೀನು ಸಹಿತ ಆರೋಪ ಆಗಿದೆ. ವಿನಾಕಾರಣ ನಮ್ಮ ಕಕ್ಷಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಎಸ್ಐಟಿ ವಶಕ್ಕೆ ನೀಡಿ ಆದೇಶಿಸಿದರು.