ಅಗ್ನಿಕುಲ್ ರಾಕೆಟ್ ಯಶಸ್ವಿ ಪರೀಕ್ಷೆ
ಶ್ರೀಹರಿಕೋಟಾ, ಮೇ.೩೧-ಚೆನ್ನೈ ಮೂಲದ ಬಾಹ್ಯಾಕಾಶ ಸ್ಟಾರ್ಟ್‌ಅಪ್ ಸಂಸ್ಥೆ ಅಗ್ನಿಕುಲ್ ಕಾಸ್ಮೊಸ್ ಅಗ್ನಿಬಾಣ ಉಪಕಕ್ಷೀಯ ರಾಕೆಟ್ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.
ಸ್ವದೇಶಿ ನಿರ್ಮಿತ ೩ಡಿ ಮುದ್ರಿತ ಕ್ರಿಯೋಜೆನಿಕ್ ರಾಕೆಟ್ ಅಗ್ನಿಬಾಣವನ್ನು ಅಗ್ನಿಕುಲ ಕಾಸ್ಮೊಸ್ ಸಂಸ್ಥೆಯು ಶ್ರೀಹರಿಕೋಟಾದಲ್ಲಿರುವ ತನ್ನ ಸ್ವಂತ ಉಡಾವಣಾ ವೇದಿಕೆ (ಲಾಂಚ್ಪ್ಯಾಡ್) ಯಿಂದ ಉಡಾವಣೆಗೊಳಿಸಿದೆ.
ಇದರೊಂದಿಗೆ ಅಂತರಿಕ್ಷಕ್ಕೆ ರಾಕೆಟ್ ಉಡಾವಣೆಗೊಳಿಸಿದ ಭಾರತದ ಎರಡನೆ ಖಾಸಗಿ ಸಂಸ್ಥೆಯೆಂಬ ಹೆಗ್ಗಳಿಕೆಗೆ ಅಗ್ನಿಕುಲ್ ಕಾಸ್ಮೊಸ್ ಸಾಕ್ಷಿಯಾಗಿದೆ.
ನಾಲ್ಕು ವಿಫಲ ಯತ್ನಗಳ ಬಳಿಕ, ಅಗ್ನಿಬಾಣ ಸಬ್-ಆರ್ಬಿಟಲ್ ಟೆಕ್ನಾಲಜಿ ಡೆಮೊನ್ಸ್ಟ್ರೇಟರ್ (ಎಸ್‌ಓಆರ್ಟಿಇಡಿ)ನ ಪರೀಕ್ಷಾರ್ಥ ಹಾರಾಟವು ನಿನ್ನೆ ಬೆಳಗ್ಗೆ ೭:೧೫ಕ್ಕೆ ನಡೆಯಿತು. ಈ ಸಂದರ್ಭದಲ್ಲಿ ಕೆಲವು ಗಣ್ಯ ಅತಿಥಿಗಳು ಉಪಸ್ಥಿತರಿದ್ದರು. ಆದರೆ ಉಡಾವಣೆಯ ನೇರ ಪ್ರಸಾರವನ್ನು ಮಾಡಲಾಗಿಲ್ಲವೆಂದು ಮೂಲಗಳು ತಿಳಿಸಿವೆ.
ಅಗ್ನಿಬಾಣದ ಯಶಸ್ವಿ ಉಡಾವಣೆ ಯನ್ನು ಅಗ್ನಿಕುಲ ಕಾಸ್ಮೊಸ್ಸಂಸ್ಥೆಯು ’ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.
ಅಲ್ಲದೆ, ನಮ್ಮ ಚೊಚ್ಚಲ ಹಾರಾಟ- ಅಗ್ನಿಬಾಣ ಎಸ್‌ಓಆರ್ಟಿಇಡಿ ಮಿಶನ್ ೧ರ ಚೊಚ್ಚಲ ಹಾರಾಟವು ಯಶಸ್ವಿಯಾಗಿರುವುದಾಗಿ ವಿನಮ್ರತೆಯಿಂದ ಘೋಷಿಸುತ್ತೇವೆ ಎಂದು ಅದು ಟ್ವೀಟ್ ಮಾಡಿದೆ. ೨೦೨೫ರ ಆರ್ಥಿಕ ವರ್ಷ ಅಂತ್ಯದ ವೇಳೆಗೆ ಅಗ್ನಿಕುಲವು, ಕಕ್ಷೀಯ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿಯನ್ನು ಅಗ್ನಿಕುಲ ಹೊಂದಿದೆ.