ಪ್ರಜ್ವಲ್‌ಗೆ ಎಸ್‌ಐಟಿ ಬೆಂಡು
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮೇ೩೧-ಅತ್ಯಾಚಾರ, ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಿನ್ನೆ ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇಂದು ಬೆಳಿಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವಿಶೇಷ ತನಿಖಾ ತಂಡ(ಎಸ್ ಐಟಿ)ದ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.ಜರ್ಮನಿಯ ಮ್ಯೂನಿಚ್‌ನಿಂದ ಮಧ್ಯಾಹ್ನ ಹೊರಟ ಲುಫ್ತಾನ್ಸಾ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯರಾತ್ರಿ ೧೨:೪೦ ರ ಸುಮಾರಿಗೆ ಆಗಮಿಸಿದ ಪ್ರಜ್ವಲ್ ಸಂಸದರಾಗಿರುವ ಕಾರಣ ಹಲವು ಪ್ರಕ್ರಿಯೆಗಳನ್ನು ನಡೆಸಿದ ಬಳಿಕ ಎಸ್‌ಐಟಿ ಅಧಿಕಾರಿಗಳ ವಶಕ್ಕೆ ಪಡೆದರು.
ನಗರಕ್ಕೆ ಬಂದಿಳಿದ ಪ್ರಜ್ವಲ್ ರೇವಣ್ಣ ನೇರವಾಗಿ ಎಸ್‌ಐಟಿ ವಶಕ್ಕೆ ಸಿಗಲಿಲ್ಲ. ರಾಜತಾಂತ್ರಿಕ ಪಾಸ್ ಪೋರ್ಟ್ ಇದ್ದ ಕಾರಣ ಅವರನ್ನು ನೇರವಾಗಿ ವಶಕ್ಕೆ ಪಡೆಯಲು ಸಾಧ್ಯವಾಗಲಿಲ್ಲ. ಲೋಕಸಭಾ ಸ್ಪೀಕರ್ ಗೆ ಮನವಿ ಮಾಡಿ ವಲಸೆ ಅಧಿಕಾರಿಗಳು ಅನುಮತಿ ಪಡೆದುಕೊಂಡಿದ್ದರು.
ಅದರಂತೆ ಪ್ರಕರಣಕ್ಕೆ ಸಂಬಂಧಿಸಿದ ೫೫ ಪುಟಗಳ ದಾಖಲೆಗಳನ್ನು ತಂದು ಎಸ್‌ಐಟಿ ಮುಖ್ಯಸ್ಥ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲರ ಮುಂದೆ ಸಹಿ ಹಾಕಲಾಯಿತು. ಅಲ್ಲಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಜ್ವಲ್ ರೇವಣ್ಣ ವಿಮಾನದಿಂದಿಳಿದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರಕ್ರಿಯೆ ನಡೆಯಿತು.
ಅಲ್ಲಿಂದ ಐವರು ಮಹಿಳಾ ಅಧಿಕಾರಿಗಳು ಪೊಲೀಸ್ ಬಿಗಿ ಭದ್ರತೆಯ ಜೊತೆ ಸಿಐಡಿ ಕಚೇರಿಗೆ ಕರೆತರಲಾಯಿತು, ರಾತ್ರಿ ಎಸ್‌ಐಟಿ ಕಚೇರಿಯ ತಂದೆ ಹೆಚ್.ಡಿ ರೇವಣ್ಣ ಅವರಿಗೆ ನೀಡಿದ್ದ ಕೊಠಡಿಯಲ್ಲೇ ಪ್ರಜ್ವಲ್ ವಾಸ್ತವ್ಯಕ್ಕೆ ಅಧಿಕಾರಿಗಳು ವ್ಯವಸ್ಥೆ ಮಾಡಿ ರೇವಣ್ಣ ಅವರಿಗೆ ನೀಡಿದ್ದ ಹಾಸಿಗೆಯನ್ನೇ ನೀಡಿದರು.
ಎಸ್ ಐಟಿ ಕಚೇರಿಯಲ್ಲಿ ರಾತ್ರಿ ಕಳೆದ ಪ್ರಜ್ವಲ್ ನನ್ನು ಇಂದು ಬೆಳಿಗ್ಗೆ ೮ ರ ವೇಳೆ ವೈದ್ಯಕೀಯ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು, ತುರ್ತು ನಿಗಾ ಘಟಕದ ಕಟ್ಟಡದಲ್ಲಿ ರಕ್ತದೊತ್ತಡ, ಮಧುಮೇಹ,ಹೃದಯದ ಕ್ಷಮತೆ, ಮೂತ್ರ ಸೇರಿದಂತೆ ಇನ್ನಿತರ, ರಕ್ತ ಪರೀಕ್ಷೆ ನಡೆಸಲಾಯಿತು.ವೈದ್ಯಕೀಯ ಪರೀಕ್ಷೆಯ ಬಳಿಕ ಎಸ್‌ಐಟಿ ಕಚೇರಿಗೆ ಕರೆತಂದು ಅಧಿಕಾರಿಗಳು ವಿಚಾರಣೆಯನ್ನು ಆರಂಭಿಸಲಿದ್ದಾರೆ. ಈಗಾಗಲೇ ಪ್ರಜ್ವಲ್ ಅವರು ವಿದೇಶದಿಂದ ತಂದಿದ್ದ ಲಗೇಜ್ ಬ್ಯಾಗ್‌ಗಳು ಹಾಗೂ ಅವರ ಮೊಬೈಲನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ.ಮೊದಲಿಗೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮೂರು ಅತ್ಯಾಚಾರ ಪ್ರಕರಣಗಳ ಸಂಬಂಧ ವಿಡಿಯೋ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
ಅತ್ಯಾಚಾರ ನಡೆದಿದೆ ಎನ್ನಲಾದ ಎಲ್ಲ ಸ್ಥಳಗಳಲ್ಲಿನ ಪ್ರಜ್ವಲ್ ರೇವಣ್ಣನಿಗೆ ಸಂಬಂಧಿಸಿದಂತಹ ಎಲ್ಲ ವಸ್ತುಗಳನ್ನು ಹಾಗೂ ಪ್ರಜ್ವಲ್ ವಿದೇಶದಿಂದ ಬರುವಾಗ ತಂದಿದ್ದ ವಸ್ತುಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಅವರು ಬಳಸುತ್ತಿದ್ದ ಮೊಬೈಲ್ ಅನ್ನೂ ಎಸ್‌ಐಟಿ ವಶಕ್ಕೆ ಪಡೆದಿದೆ. ನಾಳೆ ಪ್ರಾಥಮಿಕ ಹಂತದ ವಿಚಾರಣೆ ನಡೆಸಲಿದ್ದು ಎಸ್‌ಪಿಪಿ ಜಗದೀಶ್ ಹಾಗೂ ತನಿಖಾ ತಂಡವು ಎರಡು ಆಯಾಮಗಳಲ್ಲಿ ಪ್ರಶ್ನೆಗಳನ್ನು ತಯಾರು ಮಾಡಿಕೊಂಡಿದೆ. ಇನ್ನು ತನಿಖಾ ಹಂತದಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆಯೂ ಪ್ರಶ್ನೆ ಮಾಡಲಿದ್ದಾರೆ.
ಪ್ರಾಥಮಿಕ ವಿಚಾರಣೆಯ ಬಳಿಕ ಪ್ರಜ್ವಲ್ ನನ್ನು ಇಂದು ಮಧ್ಯಾಹ್ನದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮತ್ತೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಿದ್ದಾರೆ.ಈಗಾಗಲೇ ವಶಕ್ಕೆ ಪಡೆದಿರುವ ಪ್ರಜ್ವಲ್ ರೇವಣ್ಣ ಅವರ ಮೊಬೈಲ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದ್ದಾರೆ. ಜೊತೆಗೆ ಧ್ವನಿ ಮಾದರಿಗಳನ್ನು ಪರೀಕ್ಷೆ ನಡೆಸಲಿದ್ದಾರೆ.
ಪುರುಷತ್ವ ಪರೀಕ್ಷೆ:
ತಾನು ಅತ್ಯಾಚಾರ ಮಾಡಿಲ್ಲ ಎಂದು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವ ಸಾಧ್ಯತೆಯೂ ಇರುವುದರಿಂದ, ಮುಂದಿನ ಹಂತದಲ್ಲಿ ಪ್ರಜ್ವಲ್ ರೇವಣ್ಣರ ಪುರುಷತ್ವ ಪರೀಕ್ಷೆಯನ್ನು ಎಸ್‌ಐಟಿ ಅಧಿಕಾರಿಗಳು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಂತರ ಹಾಸನ ಸಂಸದರ ನಿವಾಸದಲ್ಲಿ ಸಂಗ್ರಹಿಸಲಾದ ಹಾಸಿಗೆ- ಹೊದಿಕೆ ಇತ್ಯಾದಿಗಳಲ್ಲಿ ಕಂಡುಬಂದಿರುವ ಡಿಎನ್‌ಎಗೂ, ಪ್ರಜ್ವಲ್ ಡಿಎನ್‌ಎಗೂ ಮ್ಯಾಚ್ ಮಾಡಲಾಗುತ್ತದೆ.
ಒಟ್ಟು ಮೂರು ಹಂತದಲ್ಲಿ ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಈ ಹಿಂದೆಯೂ ಅನೇಕರಿಗೆ ಅತ್ಯಾಚಾರ ಪ್ರಕರಣದಲ್ಲಿ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಸ್ವಾಮಿ ನಿತ್ಯಾನಂದ, ಮುರುಘಾ ಶ್ರೀ, ಅಸಾರಾಂ ಬಾಪು ಸೇರಿದಂತೆ ಹಲವರಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು.
ಪುರುಷತ್ವ ಪರೀಕ್ಷೆ:
ಇದು ಲೈಂಗಿಕ ಸಾಮರ್ಥ್ಯ ಸಾಬೀತು ಪಡಿಸುವ ಪರೀಕ್ಷೆ. ಲೈಂಗಿಕ ಕಿರುಕುಳ, ಅತ್ಯಾಚಾರ ಮುಂತಾದ ದೂರುಗಳು ಕೇಳಿ ಬಂದಾಗ ಆರೋಪಿ ಪುರುಷತ್ವ ಪರೀಕ್ಷೆ ನಡೆಸಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಮೂರು ರೀತಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಾಕ್ಷ್ಯ ನಾಶ ಪ್ರಕರಣ ಸಾಧ್ಯತೆ
ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತನಾಗಿರುವ ಸಂಸದ ಪ್ರಜ್ವಲ್‌ರೇವಣ್ಣ ಅವರು ಅಶ್ಲೀಲ ವೀಡಿಯೊ ಮಾಡಲು ಬಳಸಿರುವ ಮೊಬೈಲ್‌ನ್ನು ನಾಶ ಮಾಡಿದ್ದರೆ ಅಥವಾ ಆ ಮೊಬೈಲ್‌ನ್ನು ಪೊಲೀಸರು ಪತ್ತೆ ಹಚ್ಚಲು ಸಾಧ್ಯವಾಗದಿದ್ದರೆ ಪ್ರಜ್ವಲ್‌ರೇವಣ್ಣ ವಿರುದ್ಧ ಸಾಕ್ಷ್ಯ ನಾಶದ ಹೊಸ ಆರೋಪವನ್ನು ಪೊಲೀಸರು ದಾಖಲಿಸಲಿದ್ದಾರೆ.
ಅಶ್ಲೀಲ ವೀಡಿಯೊ ಮಾಡಿರುವ ಫೋನಿನ ಬಗ್ಗೆ ಎಸ್‌ಐಟಿ ತಂಡ ಸಂಸದ ಪ್ರಜ್ವಲ್‌ರೇವಣ್ಣ ಅವರನ್ನು ಪ್ರಶ್ನಿಸಲಿದ್ದು, ವೀಡಿಯೊ ಮಾಡಿರುವ ಫೋನಿನ ಬಗ್ಗೆ ಮಾಹಿತಿಯನ್ನೂ ಕೇಳಲಿದ್ದಾರೆ. ಒಂದು ವೇಳೆ ಪ್ರಜ್ವಲ್ ಅವರು ವೀಡಿಯೋ ಮಾಡಿರುವ ಫೋನಿನ ಬಗ್ಗೆ ಮಾಹಿತಿ ನೀಡದೆ ಪೋನ್ ಕಳೆದುಹೋಗಿದೆ ಎಂದೆಲ್ಲ ಹೇಳಿದರೆ ಅವರ ವಿರುದ್ಧ ಸಾಕ್ಷ್ಯ ನಾಶದ ಪ್ರಕರಣವೂ ದಾಖಲಾಗಲಿದೆ.
ಈ ಪ್ರಕರಣದಲ್ಲಿ ಸಂತ್ರಸ್ಥೆಯರಿಗೆ ಧೈರ್ಯ ತುಂಬಲು ಎಸ್‌ಐಟಿ ತಂಡ ಜರ್ಮನಿಯಿಂದ ಆಗಮಿಸಿದ ಪ್ರಜ್ವಲ್‌ರನ್ನು ಐವರು ಮಹಿಳಾ ಪೊಲೀಸ್ ಅಧಿಕಾರಿಗಳಿಂದಲೇ ವಿಮಾನ ನಿಲ್ದಾಣದಲ್ಲೇ ಬಂಧಿಸಿದ್ದಾರೆ ಎಂದು ಹೇಳಲಾಗಿದೆ.