ಜೂ೧ರಿಂದ ೪ರವರೆಗೆ ಮದ್ಯ ಮಾರಾಟ ನಿಷೇಧ
ಬೆಂಗಳೂರು.ಮೇ.೩೧- ಲೋಕಸಭೆ ಚುನಾವಣೆಯ ಮತ ಎಣಿಕೆ ಹಿನ್ನೆಲೆಯಲ್ಲಿ ಜೂನ್ ೧ರಿಂದ ಜೂನ್ ೬ರ ವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಜೂ.೧ ಸಂಜೆ ನಂತರ ಮದ್ಯ ಮಾರಾಟ ಸಂಪೂರ್ಣ ಸ್ಥಗಿತವಾಗಿರಲಿದೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಏ. ೨೪ ರಿಂದ ೨೬ ರವರೆಗೆ ಮದ್ಯ ಮಾರಾಟ ನಿಷೇಧ ಹೇರಲಾಗಿತ್ತು. ಮದ್ಯ ಮಾರಾಟ ನಿಷೇಧದಿಂದ ವಹಿವಾಟಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಬೆಂಗಳೂರಿನ ಮದ್ಯ ಮಾರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ನಿಷೇಧ ಆದೇಶ ನಾಳೆಯಿಂದಲ್ಲೇ ಜಾರಿಗೆ ಬರಲಿದ್ದು ಮದ್ಯ ಮಾರಾಟದ ಮೇಲಿನ ನಿಷೇಧ ಪ್ರಾರಂಭವಾಗುತ್ತದೆ. ಇದರಿಂದ ದಿನಕ್ಕೆ ೩೦ ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಲಿದೆ ಎಂದು ಮಾರತಹಳ್ಳಿಯಲ್ಲಿರುವ ದೊಡ್ಡ ಬಾರ್ ಅಂಡ್ ರೆಸ್ಟೋರೆಂಟ್‌ಗಳ ಕಾರ್ಯಾಚರಣೆಯ ಮುಖ್ಯಸ್ಥರೊಬ್ಬರು ತಿಳಿಸಿದ್ದಾರೆ. ನಾವು ಅತಿಹೆಚ್ಚು ತೆರಿಗೆ ಪಾವತಿದಾರರಾಗಿದ್ದೇವೆ. ಆದರೂ ಮದ್ಯ ಮಾರಾಟಕ್ಕೆ ಪದೇಪದೆ ಅಡ್ಡಿಯುಂಟು ಮಾಡಲಾಗುತ್ತಿದೆ. ಮದ್ಯ ಮಾರಾಟ ನಿಷೇಧದಿಂದ ನಮಗೆ ಭಾರಿ ಹಿನ್ನಡೆಯಾಗಲಿದೆ. ವಾರಾಂತ್ಯದಲ್ಲಿ ಶೇ ೬೦ ವರೆಗೆ ಮದ್ಯ ಮಾರಾಟವಾಗುತ್ತದೆ. ಇದೀಗ ನಿಷೇಧದಿಂದ ಸರಿಸುಮಾರು ಶೇ.೪೦ ರಷ್ಟು ನಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.
ಆಹಾರ ಪೂರೈಸಲು ಪಬ್‌ಗಳು ಮತ್ತು ರೆಸ್ಟೋರೆಂಟ್ ಬಾರ್‌ಗಳಿಗೆ ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಭಾರತೀಯ ರಾಷ್ಟ್ರೀಯ ರೆಸ್ಟೋರೆಂಟ್‌ಗಳ ಸಂಘದ (ಎನ್‌ಆರ್‌ಎಐ) ಪ್ರತಿನಿಧಿಗಳು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಅಧಿಕಾರಿಗಳು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ಸಂಬಂಧ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಜೂ.೪ ರಂದು ಮತ ಎಣಿಕೆ ಮುಗಿದ ನಂತರ ಮುಂಬಯಿ ಮಾದರಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವಂತೆ ಮತ್ತು ಸಂಸ್ಥೆಗಳಿಗೆ ನಿರ್ಬಂಧಗಳನ್ನು ಮಿತಿಗೊಳಿಸುವಂತೆ ಸಂಘವು ಅಬಕಾರಿ ಆಯುಕ್ತರಿಗೆ ಪತ್ರ ಬರೆದಿದೆ ಎಂದು ಬೃಹತ್ ಬೆಂಗಳೂರು ಹೊಟೇಲ್ ಮಾಲೀಕರ ಸಂಘದ (ಬಿಬಿಎಚ್‌ಎ) ಅಧ್ಯಕ್ಷ ಪಿಸಿ ರಾವ್ ತಿಳಿಸಿದ್ದಾರೆ.
ಯಾವಾಗೆಲ್ಲ ಮದ್ಯ ಮಾರಾಟ ಬಂದ್
ಜೂನ್ ೧ ರಂದು ಸಂಜೆ ೪ ರಿಂದ ಜೂನ್ ೩ರ ಸಂಜೆ ೪ ರವರೆಗೆ ವಿಧಾನ ಪರಿಷತ್ ಚುನಾವಣೆಯ ಕಾರಣ ಮದ್ಯ ಮಾರಾಟಕ್ಕೆ ನಿಷೇಧ. ಲೋಕಸಭೆ ಚುನಾವಣೆಯ ಮತ ಎಣಿಕೆಯ ಕಾರಣ ಜೂನ್ ೩ರ ಮಧ್ಯರಾತ್ರಿಯಿಂದ ಜೂನ್ ೪ ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟಕ್ಕೆ ನಿಷೇಧ. ಜೂನ್ ೬ ರಂದು ಬೆಳಿಗ್ಗೆ ೬ ರಿಂದ ಮಧ್ಯರಾತ್ರಿಯವರೆಗೆ ಎಂಎಲ್‌ಸಿ ಚುನಾವಣೆಯ ಮತ ಎಣಿಕೆಯ ಕಾರಣ ಮದ್ಯ ಮಾರಾಟ ಬಂದ್.