ಹಣಕಾಸು ಸಂಸ್ಥೆ ಕಿರುಕುಳಕ್ಕೆ ರೈತ ಬಲಿ
ತುಮಕೂರು, ಮೇ ೩೦- ಗುತ್ತಿಗೆ ಆಧಾರದಲ್ಲಿ ಬೇರೊಬ್ಬರಿಂದ ಜಮೀನು ಪಡೆದು ವ್ಯವಸಾಯ ಮಾಡಲು ಮೈಕ್ರೋ ಫೈನಾನ್ಸ್ ಕಂಪೆನಿಗಳಿಂದ ಸಾಲ ಮಾಡಿದ್ದ ರೈತನೋರ್ವ, ಕಿರುಸಾಲ ವಿತರಣಾ ಕಂಪೆನಿಗಳ ಕಾಟಕ್ಕೆ ಹೆದರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಪಾವಗಡ ತಾಲ್ಲೂಕು ವೈ.ಎನ್.ಹೊಸಕೊಟೆ ಹೋಬಳಿ ಮೇಗಳ ಪಾಳ್ಯ ತಾಂಡದ ರೈತ ಸ್ವಾಮಿನಾಯ್ಕ (೪೦) ಎಂಬುವರೇ ನೇಣಿಗೆ ಶರಣಾಗಿರುವ ದುದೈರ್ವಿ. ಸದರಿ ರೈತನಿಗೆ ಸ್ವಂತ ಜಮೀನು ಇಲ್ಲದಿದ್ದರೂ ಬೇರೆಯವರಿಂದ ಗುತ್ತಿಗೆ (ವಾರಕ್ಕೆ)ಗೆ ಭೂಮಿ ಪಡೆದು, ವ್ಯವಸಾಯ ಮಾಡುತ್ತಿದ್ದು, ಈ ಬಾರಿ ವ್ಯವಸಾಯಕ್ಕಾಗಿ ಎರಡು ಮೈಕ್ರೋ ಫೈನಾನ್ಸ್ ಕಂಪೆನಿಗಳಿಂದ ತಲಾ ಎರಡು ಲಕ್ಷದಂತೆ ನಾಲ್ಕು ಲಕ್ಷ ರೂ.ಗಳ ಸಾಲ ಮಾಡಿದ್ದು, ಮಳೆಯಿಲ್ಲದೆ, ಬೆಳೆ ಬಾರದ ಕಾರಣ ಫೈನಾನ್ಸ್ ಕಂಪೆನಿಗಳ ಸಾಲ ಕಟ್ಟಲು ಸಾಧ್ಯವಾಗಿರಲಿಲ್ಲ. ಆದರೆ ಕಿರುಸಾಲ ಕಂಪೆನಿಯವರು ದಿನೇ ದಿನೇ ಸಾಲದ ಕಂತು ಕಟ್ಟುವಂತೆ ಒತ್ತಡ ಹೇರುತ್ತಿದ್ದರಿಂದ ಭಯಗೊಂಡು ಡಾಬಸ್‌ಪೇಟೆ ಸಮೀಪದ ಬಿಲ್ಲಿನಕೋಟೆ ಗ್ರಾಮಕ್ಕೆ ಬಂದು ನೇಣಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತನಿಗೆ ಓರ್ವ ಪತ್ನಿ ಮತ್ತು ಮಗಳು ಇದ್ದು, ಮನೆಯಲ್ಲಿ ದುಡಿಯುವ ಜೀವವನ್ನು ಕಳೆದುಕೊಂಡು ಇಡೀ ಕುಟುಂಬ ಬೀದಿ ಪಾಲಾಗಿದೆ. ಈ ಸಂಬಂಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆ-ಪರಿಹಾರಕ್ಕೆ ಒತ್ತಾಯ
ಮೃತರು ಕೂಲಿ ಕಾರ್ಮಿಕರಾಗಿದ್ದು, ವಾರಕ್ಕೆಂದು ಬೇರೆಯವರ ಜಮೀನು ಪಡೆದು, ವ್ಯವಸಾಯ ಮಾಡಿ ಅವರಿಗೂ ನೀಡಿ, ತಾವು ಜೀವನ ನಡೆಸುತ್ತಿದ್ದರು. ಇವರ ಸಾವಿನಿಂದ ಇಡೀ ಕುಟುಂಬಕ್ಕೆ ದಿಕ್ಕಿಲ್ಲದಂತಾಗಿದೆ. ಜಿಲ್ಲಾಧಿಕಾರಿಗಳೇ ಮೈಕ್ರೋ ಫೈನಾನ್ಸ್ ನವರು ಬರಗಾಲ ಇರುವುದರಿಂದ ಸಾಲ ವಸೂಲಿ ಮಾಡಬಾರದೆಂದು ಆದೇಶ ನೀಡಿದ್ದರೂ, ಅದನ್ನು ಪಾಲಿಸದ ಕಿರುಸಾಲ ಕಂಪೆನಿಗಳು ರೈತರಿಗೆ ಮತ್ತು ಜನರಿಗೆ ಕಿರುಕುಳ ನೀಡುತ್ತಿವೆ. ಅವರ ಕಿರುಕುಳಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಫೈನಾನ್ಸ್ ಕಂಪೆನಿಯ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡು ದಿಕ್ಕಿಲ್ಲದ ಸ್ಥಿತಿಯಲ್ಲಿರುವ ಸ್ವಾಮಿ ನಾಯ್ಕ್ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಲಸಂದ್ರ ಮಧುಸೂಧನ್, ನಗರ ಅಧ್ಯಕ್ಷ ಮಹಮದ್ ಗೌಸ್ ಪೀರ್, ಪಾವಗಡ ತಾಲ್ಲೂಕು ಕಾರ್ಯದರ್ಶಿ ತಾವರೇನಾಯ್ಕ್ ಒತ್ತಾಯಿಸಿದ್ದಾರೆ.