ಸಿಂಗಾಪುರ ಓಪನ್:ಎರಡನೇ ಸುತ್ತಿಗೆ ಸಿಂಧು
ಸಿಂಗಾಪುರ: ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಸಿಂಗಾಪುರ ಓಪನ್ ಟೂರ್ನಿಯಲ್ಲಿ ಎರಡನೆ ಸುತ್ತು ಪ್ರವೇಶಿಸಿದ್ದಾರೆ. ಆದರೆ ಲಕ್ಷ್ಯ ಸೇನ್ ಸೋತು ಹೊರಬಿದ್ದಿದ್ದಾರೆ.
ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸಿಂಧು ಡೆನ್ಮಾರ್ಕ್ನ ಹೊಜಮಾರ್ಕ್ ವಿರುದ್ಧ 44 ನಿಮಿಷಗಳ ಕಾಲ ಹೋರಾಡಿ 21-12, 22-20 ಅಂಕಗಳಿಂದ ಗೆದ್ದರು. ಎರಡನೆ ಸುತ್ತಿನಲ್ಲಿ ರಿಯೋ ಒಲಿಂಪಿಕ್ ಚಾಂಪಿಯನ್ ಕಾರೊಲಿನಾ ಮಾರಿನ್ ಅವರನ್ನು ಎದುರಿಸಲಿದ್ದಾರೆ. ಎರಡು ವರ್ಷಗಳ ಹಿಂದೆ ಸಿಂಧು ಕೊನೆಯ ಬಾರಿಗೆ ಸಿಂಗಾಪುರ ಓಪನ್ ಗೆದ್ದಿದ್ದರು.
ಪುರುಷರ ಸಿಂಗಲ್ಸ್ನಲ್ಲಿ ವಿಶ್ವದ 14ನೇ ರಾಂಕ್ ಆಟಗಾರ ಲಕ್ಷ್ಯಸೇನ್ ಎದುರಾಳಿ ವಿಕ್ಟರ್ ಆ್ಯಕ್ಸಲ್ಸೆನ್ ವಿರುದ್ಧ 13-21,21-16,13-21 ಅಂಕಗಳಿಂದ ಸೋತರು. 61 ನಿಮಿಷಗಳ ಕಾಲ ಹೋರಾಡಿದ ಲಕ್ಷ್ಯ ನಿರ್ಣಾಯಕ ಘಟ್ಟದಲ್ಲಿ ಎಡವಿದರು.
ಇನ್ನು ಕಿದಂಬಿ ಶ್ರೀಕಾಂತ್ ಜಪಾನ್ನ ಕೊಡೈ ನರಾವಕ ವಿರುದ್ಧ 14-21,3-11 ಅಂಕಗಳಿಸಿದ್ದಾಗ ನಿವೃತ್ತಿ ಘೋಷಿಸಿದರು.
ಮಿಶ್ರ ಡಬಲ್ಸ್ನಲ್ಲಿ ಸುಮೀತ್ ರೆಡ್ಡಿ ಮತ್ತು ಎನ್.ಸಿಕ್ಕಿ ರೆಡ್ಡಿ ಜೋಡಿ ಮಲೇಷ್ಯಾದ ಸೂನ್ ಮತ್ತು ಲಾಯಿ ಶೆವೊನ್ ವಿರುದ್ಧ 18-21, 19-21 ಅಂಕಗಳಿಂದ ಸೋತರು.