ರಫಾ ದಾಳಿಗೆ ಕಮಲಾ ಹ್ಯಾರಿಸ್ ಖಂಡನೆ
ವಾಷಿಂಗ್ಟನ್, ಮೇ.೨೯- ರಫಾ ಮೇಲೆ ದಾಳಿ ನಡೆಸಿ ೪೫ ಮಂದಿ ಪ್ಯಾಲಿಸ್ತೇನಿಯರನ್ನು ಹತ್ಯೆ ಮಾಡಿದ ಇಸ್ರೇಲ್ ಕ್ರಮವನ್ನು ಅಮೇರಿಕಾ ಉಪಾಧ್ಯಕ್ಷ ಕಮಲಾ ಹ್ಯಾರೀಸ್ ತೀವ್ರವಾಗಿ ಖಂಡಿಸಿದ್ದು ದುರಂತವನ್ನು ವಿವರಿಸಲು ಪದಗಳು ಸಾಕಾಗುತ್ತಿಲ್ಲ ಎಂದಿದ್ದಾರೆ.
ಇಸ್ರೇಲ್ ಸೇನೆ ರಫಾ ಮೇಲೆ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ ೪೫ ಮಂದಿ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿದ್ದ ನಾಗರಿಕರು ಸಾವನ್ನಪ್ಪಿದ್ದರು. ಇಸ್ರೇಲ್‌ನ ಈ ಕ್ರಮ ಸಹಿಸಲಸಾಧ್ಯ ಎಂದು ತಿಳಿಸಿದ್ದಾರೆ.
ವಾಷಿಂಗ್ಟನ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು ರಫಾದಲ್ಲಿನ ಇಸ್ರೇಲ್ ದಾಳಿಗಳು “ಕೆಂಪು ಗೆರೆ” ದಾಟಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಉತ್ತರ ನೀಡಲಾಗುವುದು ಎಂದಿದ್ದಾರೆ
ಗಾಜಾದ ಪಶ್ಚಿಮ ಜಿಲ್ಲೆಯ ಟೆಂಟ್ ಕ್ಯಾಂಪ್‌ನಲ್ಲಿ ಇಸ್ರೇಲಿ ಸೇನೆ ದಾಳಿ ನಡೆಸಿದ ಪರಿಣಾ, ಕನಿಷ್ಠ ೪೫ ಮಂದಿ ಹತ್ಯೆಯಾಗಿದ್ದರು. ಘಟನೆ ನಡೆದ ಎರಡು ದಿನಗಳ ಬಳಿಕ ಕಮಲಾ ಹ್ಯಾರೀಸ್ ಪ್ರತಿಕ್ರಿಯಿಸಿ ಘಟನೆಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದಾರೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸರ್ಕಾರ ನಾಗರಿಕ ಶಿಬಿರಗಳ ಮೇಲೆ ದಾಳಿ ನಡೆಸಿ ಮುಗ್ದ ನಾಗರಿಕರನ್ನು ಹತ್ಯೆ ಮಾಡಿರುವ ಕ್ರಮವನ್ನು ಅಮೇರಿಕಾ ಎಂದಿಗೂ ಸಹಿಸಿಕೊಳ್ಳುವುದಿಲ್ಲ. ನಾಗರಿಕ ಸಾವು ನೋವು ಕುರಿತಂತೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ತೀವ್ರ ಕಳವಳ
ಮತ್ತೊಂದೆಡೆ ರಫಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಬಗ್ಗೆ ಅಮೇರಿಕಾ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.
ಇಸ್ರೇಲ್‌ನ ತನಿಖೆಯ ಫಲಿತಾಂಶಗಳನ್ನು ಅಮೇರಿಆ ಸೂಕ್ಷ್ಮವಾಗಿ ಗಮನಿಸುತ್ತಿದೆ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಸಂಪೂರ್ಣವಾಗಿ ಅನುಸರಿಸಲು, ನಾಗರಿಕರ ಮೇಲೆ ಅದರ ಕಾರ್ಯಾಚರಣೆಗಳ ಪರಿಣಾಮ ಕಡಿಮೆ ಮಾಡಲು ಮತ್ತು ಮಾನವೀಯ ನೆರವಿನ ಹರಿವನ್ನು ಗರಿಷ್ಠಗೊಳಿಸಿ ಎಂದು ಇಸ್ರೇಲ್‌ಗೆ ಸೂಚನೆ ನೀಡಿದ್ದಾರೆ.