ರೆಮೆಲ್ ಚಂಡಮಾರುತ ಲಕ್ಷಾಂತರ ಜನರ ಪರದಾಟ
ನವದೆಹಲಿ,ಮೇ೨೯- ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡ ವಾಯುಬಾರ ಕುಸಿತದಿಂದ ಉಂಟಾದ ರೆಮೆಲ್ ಚಂಡಮಾರುತ ಈಶಾನ್ಯ ರಾಜ್ಯಗಳಲ್ಲಿ ಬಾರಿ ಹಾನಿ ಉಂಟು ಮಾಡಿದ್ದು ಕನಿಷ್ಠ ೩೭ ಮಂದಿ ಸಾವನ್ನಪ್ಪಿದ್ದು ಲಕ್ಷಾಂತರ ಮಂದಿ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ.
ಬಂಗಾಳ ಕೊಲ್ಲಿ ಬಳಿಯ ಕರಾವಳಿಯಲ್ಲಿ ರೆಮಲ್ ಚಂಡಮಾರುತದಿಂದ ಉಂಟಾದ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಿಂದ ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಕನಿಷ್ಠ ೩೭ ಜನರು ಸಾವನ್ನಪ್ಪಿದ್ದಾರೆ. ರೆಮಲ್ ಆರ್ಭಟಕ್ಕೆ ಭೂಕುಸಿತ ಉಂಟು ಮಾಡಿದೆ. ನೂರಾರು ಮಂದಿ ಕಾಣೆಯಾಗಿದ್ದಾರೆ
ಸಾವಿರಾರು ಮನೆಗಳು ಮಳೆಯಿಂದ ಧ್ವಂಸಗೊಂಡಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದರಿಂದ ಲಕ್ಷಾಂತರ ಮಂದಿ ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ, ಇನ್ನೂ ಸಾವಿರಾರು ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ರೆಮಲ್ ಆರ್ಭಟದಿಂದ ಮಿಜೋರಾಂ ನಲ್ಲಿ ಅತ್ಯಂತ ಹೆಚ್ಚು ಹಾನಿಯಾಗಿದೆ
ಮಿಜೋರಾಮ್‌ನಲ್ಲಿ ೨೭ ಸಾವು:
ರೆಮಲ್ ಚಂಡಮಾರುತ ಮಿಜೋರಾಂನ ರಾಜಧಾನಿ ಐಜ್ವಾಲ್‌ನ ಮೆಲ್ತಮ್, ಹ್ಲಿಮೆನ್, ಫಾಲ್ಕಾವ್ನ್ ಮತ್ತು ಸೇಲಂ ವೆಂಗ್ ಪ್ರದೇಶಗಳಲ್ಲಿ ೨೭ ಜನರನ್ನು ಬಲಿ ತೆಗೆದುಕೊಂಡಿದೆ ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ರಕ್ಷಣಾ ಮತ್ತು ಪರಿಹಾರ ತಂಡಗಳು ಇದುವರೆಗೆ ೨೭ ಮಂದಿಯ ಮೃತದೇಹಗಳನ್ನು ಹೊರತೆಗೆದಿದ್ದು, ನಗರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಚಂಡಮಾರುತದ ನಂತರ ರಾಜ್ಯದಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಅಸ್ಸಾಂನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ೧೮ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಶಾಲಾ ಬಸ್ ಮೇಲೆ ಮರ ಬಿದ್ದು ೧೨ ಮಕ್ಕಳು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೆಮಲ್ ಚಂಡಮಾರುತದಿಂದ ನಾಗಾಲ್ಯಾಂಡ್‌ನಲ್ಲಿ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಂಡಿದೆ, ೪೦ ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಚಂಡಮಾರುತ ಭೂಕುಸಿತದ ಒಂದು ದಿನದ ನಂತರ ಶೋಧ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ರಕ್ಷಣಾ ತಂಡಗಳನ್ನು ನಿಯೋಜನೆ ಮಾಡಲಾಗಿದೆ
೪ ಲಕ್ಷ ಪರಿಹಾರ
ರೆಮೆಲ್ ಆರ್ಭಟದಿಂದ ಸಾವನ್ನಪ್ಪಿದ ಪ್ರತಿಯೊಬ್ಬರಿಗೂ ತಲಾ ೪ ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಲಾಲ್ದುಹೋಮ ಪ್ರಕಟಿಸಿದ್ದು ಜೊತೆಗೆ ಚಂಡಮಾರತದಿಂದ ಹಾನಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಒಟ್ಟಾರೆ ೧೫ ಕೋಟಿ ಪರಿಹಾರ ಪ್ರಕಟಿಸಿದ್ದಾರೆ.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ. ಜೊತೆಗೆ ಪರಿಹಾರ ಕೇಂದ್ರದಲ್ಲಿರುವ ಮಂದಿಗೆ ಆಗತ್ಯ ಮೂಲ ಸೌಕರ್ಯ ಒದಗಿಸುವಂತೆ ಸೂಚನೆ ನೀಡಿದ್ದಾರೆ.