ಕೆರೆ ಸಂರಕ್ಷಣೆಗೆ ಕರೆ
ಕೆ.ಆರ್.ಪುರ, ಮೇ.೨೮- ನಗರದ ಮೊಟ್ಟಮೊದಲ ಪಕ್ಷಿಧಾಮ ಎಂದು ಖ್ಯಾತಿ ಹೊಂದಿದ್ದ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯು ಕಾರ್ಖಾನೆ ಮತ್ತು ಅಪಾರ್ಟ್ಮೆಂಟ್ ಗಳ ಕೊಳಚೆ ನೀರು ಮತ್ತು ಒತ್ತುವರಿಯಿಂದ ಅವನತಿಯತ್ತ ಸಾಗಿರುವ ಕೆರೆಯನ್ನು ಸಂರಕ್ಷಿಸಲು ಸ್ಥಳೀಯರು ಕ್ಷೇತ್ರದ ಮೇಡಹಳ್ಳಿಯ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಉಳಿಸಿ ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ನಗರದ ಮೊಟ್ಟಮೊದಲ ಪಕ್ಷಿಧಾಮ ಎಂದು ಖ್ಯಾತಿ ಹೊಂದಿದ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯು ಈ ಭಾಗದ ಜನರಿಗೆ ಜಲಮೂಲವಾಗಿತ್ತು. ಇದ್ದೀಗ ಹತ್ತಿರದ ಅಪಾರ್ಟ್ಮೆಂಟ್. ಬಡವಾಣೆ ಹಾಗೂ ಕಾರ್ಖಾನೆಯ ಕೊಳಚೆ ನೀರಿನಿಂದ ಕಲುಷಿತಗೊಂಡಿದೆ.
ಈ ಕೆರೆಯಲ್ಲಿ ಹೂಳು ತುಂಬಿಕೊಂಡು ಜೊಂಡು ಬೆಳೆದು ನಿಂತಿದೆ. ಇದರಿಂದ ಜಲಚರ ಪ್ರಾಣಿಗಳ ಮೇಲೆ ಪ್ರಭಾವ ಬೀರಿದೆ. ಕೆರೆಯನ್ನು ಸಂರಕ್ಷಿಸುವ ಭಾಗವಾಗಿ ಫ್ರೆಂಡ್ಸ್ ಫಾರ್ ಲೇಕ್, ಮೇಡಹಳ್ಳಿ ರೈಸಿಂಗ್, ಮತ್ತು ಎಲೆ ಮಲ್ಲಪ್ಪ ಶೆಟ್ಟಿ ಕೆರೆಯ ಸ್ವಯಂ ಸೇವಕರು ಕೆರೆ ಉಳಿವಿಗಾಗಿ ೬೦ ಕ್ಕೂ ಹೆಚ್ಚು ಮಂದಿ ಕೆರೆಯಲ್ಲಿ ಸ್ವಚ್ಚತಾ ಕಾರ್ಯಕೈಗೊಂಡರು. ಕೆರೆಯನ್ನು ಉಳಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ( ಎನ್ ಜಿ ಟಿ) ಸ್ಥಳೀಯರು ಹೋರಾಟ ನಡೆಸುತ್ತಿದ್ದಾರೆ. ಆದರೂ ಕೆರೆಯ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಕಟ್ಟಡ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಕಡಿವಾಣ ಇಲ್ಲದೆ ಕೆರೆ ಪ್ರದೇಶ ಒತ್ತುವರಿಯಾಗುತ್ತಿದೆ.
ಕೆರೆಯನ್ನು ಸಂರಕ್ಷಿಸಲು ಸಂಬಂಧ ಪಟ್ಟ ಸಣ್ಣ ನೀರಾವರಿ ಇಲಾಖೆ, ಬಿಬಿಎಂಪಿ, ಬಿಡಿಎ,ಕೆರೆ ಅಭಿವೃದ್ದಿ ಪ್ರಾಧಿಕಾರ ಗಮನವಹಿಸಬೇಕೆಂದು ಫ್ರೆಂಡ್ಸ್ ಫಾರ್ ಲೇಕ್‌ನ ಕೊ ಪೌಂಡರ್ ಮಾಧುರಿಸುಬ್ಬರಾವ್ ತಿಳಿಸಿದರು.
ಈ ಸ್ವಚ್ಚತಾ ಅಭಿಯಾನದಲ್ಲಿ ಮಕ್ಕಳು, ವೃದ್ಧರು ಸೇರಿದಂತೆ ಎಲೆ ಮಲ್ಲಪ್ಪ ಶೆಟ್ಟಿಯವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.