ಗೋವಾದಲ್ಲಿ ಕೈಕೈ ಮಿಲಾಯಿಸಿದ ನಿರ್ಮಾಪಕರು
ಬೆಂಗಳೂರು:ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಗೋವಾ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದ್ದು. ಈ ಪೈಕಿ ಹಿರಿಯ ನಿರ್ಮಾಪಕರುಗಳು ಕೈಕೈ ಮಿಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಾಲೇ ಥಿಯೇಟರ್ ಸಮಸ್ಯೆ, ಸ್ಟಾರ್‌ವಾರ್ ಹೀಗೆ ಹತ್ತು ಹಲವು ಸಮಸ್ಯೆಗಳೊಂದಿಗೆ ಕನ್ನಡ ಚಿತ್ರರಂಗ ತೀರಾ ಸಂಕಷ್ಟಕ್ಕೀಡಾಗಿದೆ. ಇದನ್ನು ಬಗೆಹರಿಸಲು ಮುಂದಾಗಬೇಕಿದ್ದ ಕರ್ನಾಟಕ ವಾಣಿಜ್ಯಮಂಡಳಿಯ ಪ್ರಮುಖರು ಮೇ ೨೭ರಂದು ಎರಡು ದಿನಗಳ ಕಾಲ ಗೋವಾಪ್ರವಾಸಕ್ಕೆ ತೆರಳಿದ್ದಾರೆ.
ಮಂಡಳಿಯ ಬೈಲಾ ಪ್ರಕಾರ ಮೂಲಗಳ ಪ್ರಕಾರ ಪ್ರಾಯೋಜಕರ ನೆರವಿನಿಂದ ಪ್ರವಾಸ ಹೋಗಿದ್ದಾರೆ. ಬೈಲಾ ಪ್ರಕಾರ ಕಾರ್ಯಕಾರಿ ಮಂಡಳಿ ಸಭೆಯನ್ನು ಹೊರಗೆ ಮಾಡುವಂತಿಲ್ಲ. ಈಗಾಗಲೇ ವಾಣಿಜ್ಯ ಮಂಡಳಿಯಲ್ಲಿ ನಾಲ್ಕು ಸುತ್ತಿನ ಸಭೆ ನಡೆಸಲಾಗಿದೆ. ಇದೀಗ ಅನೌಪಚಾರಿಕವಾಗಿ ಗೋವಾದಲ್ಲಿಯೇ ಸಭೆನಡೆಸಿ ನಿರ್ಣಯ ಕೈಗೊಳ್ಳಲು ತೆರಳಿದ್ದರು ಎನ್ನಲಾಗಿದೆ.
ನಿರ್ಮಾಪಕರ ಡಿಶುಂಡಿಶುಂ: ಹೀಗಾಗಿ ಸುಮಾರು ೪೦ಜನರ ತಂಡ ಗೋವಾದಲ್ಲಿ ಬೀಡುಬಿಟ್ಟಿದೆ. ಗೋವಾದ ಹಿಬೀಸ್ ರೆಸಾರ್ಟ್ ನಲ್ಲಿ ನಿರ್ಮಾಪಕ ಎ ಗಣೇಶ್, ರಥಾವರ ಮಂಜುನಾಥ್,ಸತೀಶ್ ಆರ್ಯ ನಡುವೆ ಗಲಾಟೆ ನಡೆದಿದೆ. ಜಗಳ ಬಿಡಿಸಲು ಹೋದವರಿಗೂ ಈ ಬಿಸಿ ತಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಗಣೇಶ್ ತಲೆಗೆ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಹೀಗಾಗಿ, ಬಸ್‌ನಲ್ಲಿ ತೆರಳಿದ್ದ ಗಣೇಶ್ ಹಾಗೂ ಮಂಜುನಾಥ್ ಗಲಾಟೆ ನಂತರ ಫ್ಲೈಟ್ ನಲ್ಲಿ ವಾಪಸ್ಸಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.