ರೆಬಲ್ ಸ್ಟಾರ್‌ಗೆ 72ನೇ ಹುಟ್ಟುಹಬ್ಬದ ಸಂಭ್ರಮ
ಬೆಂಗಳೂರು,ಮೇ.೨೯- ಭಾಷೆ ಒರಟಾದರೂ ಎಲ್ಲರನ್ನೂ ಪ್ರೀತಿಸುವ ಗುಣದಿಂದ ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಕಲಿಯುಗದ ಕರ್ಣ ಅಂಬರೀಶ್ ಅವರಿಗೆ ಇಂದು ೭೨ನೇ ಹುಟ್ಟುಹಬ್ಬದ ಸಂಭ್ರಮ.
ಅಂಬರೀಷ್ ಭೌತಿಕವಾಗಿ ಅಭಿಮಾನಿಗಳ ಜೊತೆ ಇಲ್ಲದಿದ್ದರೂ ಶಾಶ್ವತವಾಗಿ ಅವರ ಹೃದಯದಲ್ಲಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಸೇರಿದಂತೆ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಂಬರೀಶ್ ಸಮಾಧಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು.
ಈ ವೇಳೆ ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಆಪ್ತರು, ಕುಟುಂಬದ ಸದಸ್ಯರು, ಚಿತ್ರರಂಗದ ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಜರಿದ್ದು ಅಂಬರೀಷ್ ಹುಟ್ಟುಹಬ್ಬನ್ನು ಆಚರಿಸಿ ಅಂಬಿಯನ್ನು ಸ್ಮರಿಸಿಕೊಂಡರು.
ನಾಗರಹಾವು ಚಿತ್ರದ ಜಲೀಲನಾಗಿ, ರಂಗನಾಯಕಿಯ ರಾಮಣ್ಣನಾಗಿ ಹೀಗೆ ತರಹೇವಾರಿ ಪಾತ್ರ ಮಾಡಿ ಎಲ್ಲರ ಮನದಲ್ಲಿ ಖಾಯಂ ಜಾಗ ಮಾಡಿಕೊಂಡಿದ್ದಾರೆ. ನಿಷ್ಕಲ್ಮಶ ಮನಸ್ಸು ಎಂತಹವರಿಗೂ ಇಷ್ಟವಾಗುತ್ತದೆ. ಅಂಬರೀಶ್ ಎಂದೂ ಸಾಫ್ಟ್ ಆಗಿ ಮಾತನಾಡಿದವ್ರೇ ಅಲ್ಲ. ಆದರೆ ಅವರ ಮನಸ್ಸು ಮಗು ರೀ ಅನ್ನೋರೇ ಹೆಚ್ಚು. ಮಂಡ್ಯ ಭಾಷೆಯಲ್ಲಿ ಅವರಿಂದ ಬೈಸಿಕೊಳ್ಳದವರೇ ಇಲ್ಲ ನೋಡಿ. ಅಷ್ಟು ಪ್ರೀತಿಯಿಂದ ಆತ್ಮೀಯತೆಯಿಂದಲೇ ಅಂಬರೀಶ್ ಎಲ್ಲರನ್ನೂ ಗದರುತ್ತಿದ್ದರು, ಗದರುವಿಕೆಯಲ್ಲಿ ಪ್ರೀತಿ ಕಾಣುತ್ತಿದ್ದರು ಅಭಿಮಾನಿಗಳು,
ಸಿಂಗಾಪುರಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದ ನಂತರ ಕಡೆಯದಾಗಿ “ಅಂಬಿ ನಿಂಗೆ ವಯಸ್ಸಾಯ್ತೋ” ಸಿನಿಮಾದಲ್ಲಿ ನಟಿಸಿದ್ದರು. ಇದರ ಜೊತೆಗೆ ಕುರುಕ್ಷೇತ್ರ ಚಿತ್ರದಲ್ಲಿ ಭೀಷ್ಮನ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು.
ದರ್ಶನ್ ಬಿಡುಗಡೆ
ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿನ್ನೆಯೇ ನಟ ದರ್ಶನ್ ಅವರ ಹುಟ್ಟುಹಬ್ಬದ ಸಿಡಿಪಿ ಬಿಡುಗಡೆ ಮಾಡಿ ಅಂಬರೀಷ್ ಅಪ್ಪಾಜಿ ಯಾವಾಗಲು ಹೃದಯದಲ್ಲಿ ಶಾಶ್ವತವಾಗಿ ಮನಸ್ಸಿನಲ್ಲಿ ಇರುತ್ತಾರೆ ಎಂದು ನೆನಪು ಮಾಡಿಕೊಂಡಿದ್ದರು.
ಪುಟ್ಟಣ್ಣ ಕಣಗಾಲರ ಶಿಷ್ಯ ಅಂಬರೀಶ್ ಮೊದಲು ನಾಗರಹಾವು ಚಿತ್ರದಲ್ಲಿ ನಟಿಸಿದ್ರು. ಜಲೀಲನ ಪಾತ್ರದ ಮೂಲಕ ಇಡೀ ನಾಡಿನ ಜನತೆಯ ಹೃದಯ ಗೆದ್ದರು. ಇದಾದ ಮೇಲೆ ಪುಟ್ಟಣ್ಣ ಅವರ ರಂಗನಾಯಕಿ ಚಿತ್ರದಲ್ಲಿ ರಾಮಣ್ಣನಾಗಿಯೇ ನಟಿಸಿದ್ದರು.
ಪಡುವಾರಳ್ಳಿ ಪಾಂಡವರು ಚಿತ್ರದಲ್ಲಿ ಕರಿಯನಾಗಿ ಕಾಣಿಸಿಕೊಂಡಿದ್ದರು.ಮೃಗಾಲಯ ಅದ್ಭುತ ಚಿತ್ರ. ತಮ್ಮಅಭಿನಯ ಮತ್ತು ವಿಶಿಷ್ಟ ಕಂಠಸಿರಿಯಿಂದಲೇ ಅಂಬರೀಶ್ ಎಲ್ಲರ ಹೃದಯ ಗೆದ್ದ ಹೃದಯವಂತ ಅಂಬರೀಷ್ ಅವರಿಗೆ ಎಲ್ಲೆಡೆಯಿಂದ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.