ಸಂಪ್‌ಗೆ ಬಿದ್ದ 2 ವರ್ಷದ ಕಂದಮ್ಮ ದುರ್ಮರಣ
ಬೆಳಗಾವಿ, ಮೇ.೨೭-ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕಂಗ್ರಾಳ ಗಲ್ಲಿಯಲ್ಲಿ ನಡೆದಿದೆ.
ಕಂಗ್ರಾಳ ಗಲ್ಲಿಯ ಸಾಯೀಶಾ ಸಂದೀಪ್ ಬಡವನಾಚೆ(೨) ಮೃತಪಟ್ಟ ಮಗು. ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಣ್ಮರೆಯಾದುದರಿಂದ ಗಾಬರಿಯಾದ ಪೋಷಕರು ಹುಡುಕಾಟ ಆರಂಭಿಸಿದ್ದರು. ಎಷ್ಟೇ ಹುಡುಕಿದರೂ ಕಾಣದಿದ್ದಾಗ ಪೋಷಕರು ಸಂಪ್ ಪರಿಶೀಲನೆ ಮಾಡಿದಾಗ ಅದರೊಳಗೆ ಬಿದ್ದಿದ್ದ ಮಗು ಸಾಯೀಶಾ ಕಂಡುಬಂದಿದ್ದಳು.
ಕೂಡಲೇ ಸಮೀಪದ ಆಸ್ಪತ್ರೆಗೆ ಮಗುವನ್ನು ಪೋಷಕರು ಕರೆದೊಯ್ದರಾದರೂ, ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮಗು ತೀರಿ ಹೋಗಿದ್ದರ ಬಗ್ಗೆ ವೈದ್ಯರು ಮಾಹಿತಿ ನೀಡಿದರು.
ಖಡೇ ಬಜಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.