ಅತ್ತಿಗೆ ಸಂಗ ಬಿಡದ ಮೈದುನನ ಕೊಂದ ಪ್ರಿಯಕರ
ಕಲಬುರಗಿ,ಮೇ.೨೭- ತನ್ನ ಅತ್ತಿಗೆಯ ಜೊತೆಗಿನ ಅನೈತಿಕ ಸಂಬಂಧದಿಂದ ದೂರ ಇರು ಎಂದು ಬುದ್ಧಿವಾದ ಹೇಳಿದ ಮೈದುನನನ್ನು ಅತ್ತಿಗೆಯ ಪ್ರಿಯಕರ ಬರ್ಬರವಾಗಿ ಕಲ್ಲಿನಿಂದ ಜಜ್ಜಿ ಕೊಲೆಗೈದ ಘಟನೆ ಆಳಂದ ತಾಲ್ಲೂಕಿನ ಮುನ್ನೊಳ್ಳಿ ಗ್ರಾಮದಲ್ಲಿ ನಡೆದಿದೆ.
ಮುನ್ನೊಳ್ಳಿ ಗ್ರಾಮದ ಹೀರಾಲಾಲ್ ಲದಾಫ್ (೩೫) ಕೊಲೆಯಾದ ವರು, ಗ್ರಾಮದ ಹೊರವಲಯದಲ್ಲಿ ನಡೆದಿರುವ ಕೃತ್ಯದ ಆರೋಪಿಯ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.
ಕೊಲೆಯಾದ ಹೀರಾಲಾಲ್‌ನ ಅತ್ತಿಗೆಯ ಜೊತೆ ರವಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಹೀರಾಲಾಲ್ ಅಣ್ಣ ಬಾಬು ಲದಾಫ್, ತನ್ನ ಪತ್ನಿಯ ಅನೈತಿಕ ಸಂಬಂಧ ಕಂಡು ದೂರ ಇರುವಂತೆ ಪತ್ನಿಗೆ ಹೇಳಿದ್ದ.
ಆದರೆ ಬಾಬು ಲದಾಫ್ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯ ಮೇಲೆಯೇ ಹಲ್ಲೆ ಮಾಡಿಸಿದ್ದಳು.
ಪತ್ನಿಯ ಅನೈತಿಕ ಸಂಬಂಧ ಹಾಗೂ ಹಲ್ಲೆಯಿಂದ ಮಾನಸಿಕವಾಗಿ ನೊಂದು ಬಾಬು ಲದಾಫ್ ಊರನ್ನೇ ಬಿಟ್ಟು ಹೋಗಿದ್ದ. ಅಣ್ಣನ ಸಂಸಾರವನ್ನು ಸರಿದಾರಿಗೆ ತರಲು ಯತ್ನಿಸಿದ್ದ. ಹೀರಾಲಾಲ್, ಅನೈತಿಕ ಸಂಬಂಧ ಬಿಟ್ಟು ಬಿಡುವಂತೆ ರವಿಗೆ ಹೇಳಿದ್ದ. ಇದೇ ವಿಚಾರವಾಗಿ ಹೀರಾಲಾಲ್ ಹಾಗೂ ರವಿ ಮಧ್ಯೆ ಆಗಾಗ ಗಲಾಟೆ ಕೂಡ ಆಗಿತ್ತು.
ಎರಡು ದಿನಗಳ ಹಿಂದೆ ಕುಡಿದ ನಶೆಯಲ್ಲಿ ಇವರಿಬ್ಬರೂ ಗಲಾಟೆ ಮಾಡಿಕೊಂಡಿದ್ದರು. ಬಳಿಕ ರವಿ ಹೀರಾಲಾಲ್ ಮೇಲೆ ಹಲ್ಲೆ ಮಾಡಿ ಕಲ್ಲಿನಿಂದ ಜಜ್ಜಿಹಾಕಿದ್ದಾನೆ. ಗಾಯಗೊಂಡು ಹೀರಾಲಾಲ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.