ರಕ್ತದ ಮಾದರಿ ತಿರುಚಿದ ವೈದ್ಯರಿಬ್ಬರ ಬಂಧನ
ಪುಣೆ(ಮಹಾರಾಷ್ಟ್ರ), ಮೇ.೨೭-ಪೋರ್ಷೆ ಕಾರು ಅಪಘಾತದ ಆರೋಪಿ ವೇದಾಂತ್ ಅಗರ್ವಾಲ್ ಅವರ ರಕ್ತದ ಮಾದರಿಯನ್ನು ಬದಲಿಸಿದ್ದ ಇಬ್ಬರು ವೈದ್ಯರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುಣೆಯಲ್ಲಿ ೧೭ ವರ್ಷದ ಬಾಲಕ ವೇದಾಂತ್ ಅಗರ್ವಾಲ್ ಐಷಾರಾಮಿ ಪೋರ್ಷೆ ಕಾರನ್ನು ಕುಡಿದ ಮತ್ತಿನಲ್ಲಿ ಚಲಾಯಿಸಿಕೊಂಡು ಹೋಗಿ ಬೈಕ್‌ಗೆ ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದಾದ ಬಳಿಕ ಪೊಲೀಸರು ಬಾಲಾಪರಾಧಿ ನ್ಯಾಯಾಲಯದ ತೀರ್ಪಿನಂತೆ ವೇದಾಂತ್‌ರನ್ನು ಬಂಧಿಸಿ ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಬಳಿಕ ತಂದೆ ವಿಶಾಲ್ ಅಗರ್ವಾಲ್‌ರನ್ನು ಬಂಧಿಸಿದ್ದರು.
ಎಲ್ಲೆಡೆ ಪೊಲೀಸರ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಾಮೀನನ್ನು ರದ್ದುಗೊಳಿಸಿ ಮತ್ತೆ ಬಂಧಿಸಲಾಗಿತ್ತು. ಮೊದಲು ವಿಶಾಲ್ ಅಗರ್ವಾಲ್ ನನ್ನ ಮಗ ಕಾರು ಓಡಿಸುತ್ತಿರಲಿಲ್ಲ ಕಾರಿಗೆ ಬೇರೆ ಡ್ರೈವರ್ ಇದ್ದಾರೆ ಎಂದು ಹೇಳಿದ್ದರು. ಕಾರು ಚಾಲಕನನ್ನು ಪೊಲೀಸರು ಪ್ರಶ್ನಿಸಿದಾಗ ಆತ ಇಲ್ಲ ವಿಶಾಲ್ ಅವರೇ ತಮ್ಮ ಮಗನೇ ಕಾರು ಓಡಿಸುತ್ತಾನೆ. ನೀನು ಪ್ಯಾಸೆಂಜರ್ ಸೀಟ್‌ನಲ್ಲಿ ಕುಳಿತುಕೋ ಎಂದಿದ್ದರು ಎಂಬ ಮಾಹಿತಿ ನೀಡಿದ್ದಾರೆ.
ಇದೆಲ್ಲಾ ನಡೆದ ಬಳಿಕ ಆತ ಮದ್ಯಪಾನ ಮಾಡಿರಲಿಲ್ಲ ಎನ್ನುವ ವರದಿ ಆಸ್ಪತ್ರೆಯಿಂದ ಹೊರಬಿದ್ದಿತ್ತು. ಅದನ್ನು ತನಿಖೆ ಮಾಡಿದ ಬಳಿಕ ವೇದಾಂತ್‌ರ ರಕ್ತದ ಮಾದರಿಯನ್ನು ಬದಲಾಯಿಸಲಾಗಿದೆ ಎನ್ನುವುದನ್ನು ಅರಿತ ಪೊಲೀಸರು ರಕ್ತದ ಮಾದರಿಯನ್ನು ತಿರುಚಿದ ಆರೋಪದ ಮೇಲೆ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ. ವೈದ್ಯರ ಈ ನಡೆಗೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ಪುಣೆ ನಗರದಲ್ಲಿ ಮೇ ೧೮-೧೯ರ ಮಧ್ಯರಾತ್ರಿ ೧೭ ವರ್ಷದ ಬಾಲಕನೊಬ್ಬ ಸುಮಾರು ೩ ಕೋಟಿ ಮೌಲ್ಯದ ಪೋರ್ಷೆ ಕಾರನ್ನು ಅತಿವೇಗದಲ್ಲಿ ಚಲಾಯಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ವಾಹನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಬ್ಯಾಲೆನ್ಸ್ ಕಳೆದುಕೊಂಡು ರಸ್ತೆಯಲ್ಲಿ ಬಹಳ ದೂರ ಹೋಗಿ ಬಿದ್ದಿತ್ತು.
ಎರಡು ದಿನಗಳ ಹಿಂದೆ, ಚಾಲಕನನ್ನು ಅಪಹರಿಸಿ, ಬೆದರಿಕೆ ಹಾಕಿದ್ದಕ್ಕಾಗಿ ಮತ್ತು ಚಾಲಕನಿಗೆ ಅಪರಾಧವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಕ್ಕಾಗಿ ಬಾಲಕನ ಅಜ್ಜನನ್ನು ಬಂಧಿಸಲಾಗಿದೆ.