ಅಗ್ನಿ ದುರಂತ ಹಸುಗೂಸುಗಳ ಸಾವು

ದೆಹಲಿಯ ಬೇಬಿಕೇರ್ ಆಸ್ಪತ್ರೆಯಲ್ಲಿ ಅವಘಡ:೭ ನವಜಾತ ಶಿಶುಗಳ ಮರಣ
ನವದೆಹಲಿ,ಮೇ.೨೬-ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿರುವ ಬೇಬಿ ಕೇರ್ ಆಸ್ಪತ್ರೆಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ೭ ಮಂದಿ ಹಸುಗೂಸುಗಳು ಸಾವನ್ನಪ್ಪಿರುವ ಮನಕಲಕುವ ಘಟನೆ ಸಂಭವಿಸಿದೆ.
ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಆಸ್ಪತ್ರೆಗೆ ಆವರಿಸಿ ಧಗಧಗನೆ ಹೊತ್ತಿ ಉರಿಯಿತು, ಇದರಿಂದಾಗಿ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಪರಿಹಾರ ಕಾರ್ಯಾಚರಣೆಗಿಳಿಯಿತು. ಸಾಕಷ್ಟು ಹರಸಾಹಸ ಪಟ್ಟು ಬೆಂಕಿಯನ್ನು ತಹಬದಿಗೆ ತರುವಲ್ಲಿ ಸಫಲವಾಯಿತು. ಆದರೆ, ೭ ಮಂದಿ ಹಸುಗೂಸುಗಳ ಪ್ರಾಣಪಕ್ಷಿ ಹಾರಿ ಹೋಗಿತ್ತು. ತಮ್ಮ ಶಿಶುಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಈ ಘೋರ ದುರಂತ ಸಂಭವಿಸುತ್ತಿದ್ದಂತೆ ಪೋಷಕರು ಭಯಭೀತರಾಗಿ ತಮ್ಮ ಶಿಶುಗಳ ಪರಿಸ್ಥಿತಿ ಏನಾಗಿದೆ ಎಂಬುದು ಗೊತ್ತಾಗದೆ ಕಂಗಾಲಾದರು.
೧೨ ನವಜಾತ ಶಿಶುಗಳನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದೆ. ಆದರೆ, ೭ ಶಿಶುಗಳು ಸಾವನ್ನಪ್ಪಿವೆ. ಉಳಿದ ೫ ಶಿಶುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಗ್ನಿಶಾಮಕ ದಳ ಬೆಂಕಿಯನ್ನು ಹತೋಟಿಗೆ ತಂದಿದೆ. ಬೆಂಕಿಯ ಕೆನ್ನಾಲಿಗೆಗೆ ಆಸ್ಪತ್ರೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಪಕ್ಕದ ಕಟ್ಟಡಕ್ಕೂ ಬೆಂಕಿ ತಗುಲಿದೆ. ಘಟನೆಯಲ್ಲಿ ಹಲವರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿಗೂ ಮುನ್ನ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆಸ್ಪತ್ರೆಯ ಹೊರಭಾಗದಲ್ಲಿದ್ದ ಆಂಬುಲೆನ್ಸ್‌ಗಳಿಗೆ ಆಮ್ಲಜನಕ ತುಂಬಿಸುತ್ತಿದ್ದಾಗ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮೊದಲು ಆಸ್ಪತ್ರೆಗೆ ಬೆಂಕಿ ತಗುಲಿ ಬಳಿಕ ಪಕ್ಕದ ಕಟ್ಟಡಕ್ಕೂ ವಿಸ್ತರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ದೆಹಲಿ ವಿಧಾನಸಭಾ ಸ್ಪೀಕರ್ ರಾಮನಿವಾಸ್ ಗೋಯಲ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು,ಅಗ್ನಿಶಾಮಕ ಅಧಿಕಾರಿ ಅತುಲ್ ಗರ್ಗ್ ಮಾತನಾಡಿ, “ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ. ವಿವೇಕ್ ವಿಹಾರ್ ಪ್ರದೇಶದ ಐಟಿಐ ಬ್ಲಾಕ್ ಬಿ ಬಳಿ ಇರುವ ಬೇಬಿ ಕೇರ್ ಸೆಂಟರ್‌ನಿಂದ ರಾತ್ರಿ ಅಗ್ನಿಶಾಮಕ ದಳಕ್ಕೆ ತುರ್ತು ಫೋನ್ ಕರೆ ಬಂದಿತ್ತು. ಕೂಡಲೇ ಒಟ್ಟು ಒಂಬತ್ತು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಯಿತು” ಎಂದು ಹೇಳಿದರು.
ಆಸ್ಪತ್ರೆಯಿಂದ ರಕ್ಷಿಸಲ್ಪಟ್ಟ ನವಜಾತ ಶಿಶುಗಳನ್ನು ಪೂರ್ವ ದೆಹಲಿಯ ಅಡ್ವಾನ್ಸ್ ಎನ್ ಐಸಿಯು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿನ ಜನನಿಬಿಡ ಗೇಮ್ ಝೋನ್‌ನಲ್ಲಿ ಭಾರೀ ಪ್ರಮಾಣದ ಬೆಂಕಿ ಅನಾಹುತ ಸಂಭವಿಸಿ, ಕಟ್ಟಡ ಕುಸಿದು ಕನಿಷ್ಠ ೩೨ಮಂದಿ ಸಾವನ್ನಪ್ಪಿದ ದಿನವೇ ದೆಹಲಿಯಲ್ಲೂ ಈ ಭೀಕರ ಅಗ್ನಿ ದುರಂತ ಸಂಭವಿಸಿದೆ.