ಪರಿಷತ್ ಚುನಾವಣೆ ಬಿಜೆಪಿ-ಜೆಡಿಎಸ್ ಸಭೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮೇ೨೬:ಬೆಂಗಳೂರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಇಂದು ನಡೆದಿದ್ದು, ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರು ಸಮನ್ವಯದಿಂದ ಕೆಲಸ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು.
ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಜೆಡಿಎಸ್‌ನ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಈ ಸಮನ್ವಯ ಸಮಿತಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಗೋಪಾಲಯ್ಯ, ಮುನಿರತ್ನ, ಸಿ.ಪಿ ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ, ಯುವ ಜನತಾದಳದ ಅಧ್ಯಕ್ಷ ನಿಖಿಲ್‌ಕುಮಾರಸ್ವಾಮಿ, ಮೈತ್ರಿಕೂಟದ ಅಭ್ಯರ್ಥಿ ಅ. ದೇವೇಗೌಡ ಸೇರಿದಂತೆ ಎರಡೂ ಪಕ್ಷಗಳ ಪ್ರಮುಖ ಮುಖಂಡರುಗಳು ಭಾಗಿಯಾಗಿದ್ದರು.
ವಿಧಾನ ಪರಿಷತ್‌ನ ಚುನಾವಣೆಯಲ್ಲಿ ಎರಡೂ ಪಕ್ಷಗಳ ಮೈತ್ರಿ ಮುಂದುವರೆದಿದ್ದು, ಈ ಚುನಾವಣೆಗಳಲ್ಲಿ ಒಗ್ಗಟ್ಟಿನಿಂದ ಸಮನ್ವಯವಾಗಿ ಕೆಲಸ ಮಾಡಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ರೂಪಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆಗಳು ನಡೆದವು.
ಎನ್‌ಡಿಎ ಅಭ್ಯರ್ಥಿಗಳ ಪರ ಎರಡೂ ಪಕ್ಷಗಳ ನಾಯಕರುಗಳು ಪ್ರಚಾರ ನಡೆಸುವ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆದಿದ್ದು, ಬೆಂಗಳೂರು ಸೇರಿದಂತೆ ಎಲ್ಲೆಡೆ ಎನ್‌ಡಿಎ ಅಭ್ಯರ್ಥಿಗಳ ಪರ ಎರಡೂ ಪಕ್ಷಗಳ ನಾಯಕರ ಪ್ರಚಾರ ಸಭೆಗಳನ್ನು ಆಯೋಜಿಸುವ ಬಗ್ಗೆಯೂ ಚರ್ಚೆಗಳು ನೆಡೆದವು. ಶತಾಯ-ಗತಾಯ ಈ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಲು ರೂಪಿಸಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ಸುದೀರ್ಘ ಚರ್ಚೆಗಳು ನಡೆದವು.