ಮೈತ್ರಿಕೂಟ ನಾಯಕರ ಜತೆ ಚರ್ಚಿಸಿ ಪಿಎಂ ಆಯ್ಕೆ
ನವದೆಹಲಿ,ಮೇ೨೬- ದೇಶದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಿದರೆ ಪ್ರಧಾನಿ ಯಾರಾಗಬೇಕು ಎನ್ನುವ ಕುರಿತು ಮೈತ್ರಿಕೂಟದ ಎಲ್ಲಾ ನಾಯಕರು ನಿರ್ಧರಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇಂಡಿಯಾ ಮೈತ್ರಿಕೂಟಕ್ಕೆ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಆಗಾಗ ಮಾಡುವ ಗೇಲಿಗೆ ತಿರುಗೇಟು ನೀಡಿದ ಅವರು ೨೦೦೪ ರಿಂದ ೨೦೧೪ ರವರೆಗೆ ೧೦ ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಚುನಾವಣೆಗೆ ಮೊದಲು ಪ್ರಧಾನಿ ಅಭ್ಯರ್ಥಿ ಪ್ರಸ್ತಾಪಿಸದೆ ಸರ್ಕಾರ ನಡೆಸಿದೆ ಎಂದು ಹೇಳಿದ್ದಾರೆ.
ಶಿಮ್ಲಾದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ೨೦೦೪ರಲ್ಲಿ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಪ್ರಧಾನಿಯಾಗಬೇಕೆಂದು ಬಯಸಿದ್ದರು, ಆದರೆ ಅವರು ನಿರಾಕರಿಸಿದರು, ನಮಗೆ ಬಹುಮತವಿರಲಿಲ್ಲ, ಆಗ ನಮಗೆ ೧೪೦ ಸ್ಥಾನಗಳಿದ್ದವು, ೨೦೦೯ ರಲ್ಲಿ ೨೦೯ ಸ್ಥಾನಗಳೊಂದಿಗೆ ಅಧಿಕಾರಕ್ಕೆ ಮರಳಿದೆವು. ಯುಪಿಎ ಮೈತ್ರಿಕೂಟ ರಚಿಸಿ ಸರ್ಕಾರ ನಡೆಸಿದ್ದೇವೆ. ೧೦ ವರ್ಷ ಆಡಳಿತ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
“ಕೆಲವೊಮ್ಮೆ ಬುದ್ಧಿವಂತರು ಸಹ ಇತಿಹಾಸ ಮರೆತುಬಿಡುತ್ತಾರೆ,” ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎನ್ನುವ ಬಿಜೆಪಿ ನಾಯಕರ ಹೇಳಿಕೆ ಬಾಲಿವುಡ್ ನಟ ಅಮಿತಾಬಚ್ಚನ್ ಅವರು ನಡೆಸಿದ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ ಪತಿ ಎನ್ನುತ್ತಿದ್ದಾರೆ ಎಂದರು.
೨೦೧೪ರಲ್ಲಿ ೨ ಕೋಟಿ ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಹಣದುಬ್ಬರ ತಗ್ಗಿಸುವ ಕುರಿತು ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಪ್ರಧಾನಿ ೨೦೧೪ ಮತ್ತು ೨೦೧೯ ರಲ್ಲಿ ದೊಡ್ಡ ಭರವಸೆ ನೀಡಿ ಜನರನ್ನು ಮರಳು ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಅವರು ಸಹಾಯ ಮಾಡಲಿಲ್ಲ. ಬಿಜೆಪಿ ದೇಶದಲ್ಲಿ ಸರ್ಕಾರಗಳನ್ನು ಉರುಳಿಸಲು ಕೆಲಸ ಮಾಡುತ್ತಿದೆ ಮತ್ತು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಎಂದು ಆರೋಪಿಸಿದ್ದಾರೆ.