ಹುಲಿ ದಾಳಿಗೆ ಮಹಿಳೆ ಬಲಿ
ಮೈಸೂರು,ಮೇ.೨೬- ಮೇಕೆಗಳನ್ನು ಮೇಯಿಸುತ್ತಿದ್ದಾಗ ಹುಲಿಯೊಂದು ಹಠಾತ್ ದಾಳಿ ನಡೆಸಿ ಮಹಿಳೆಯನ್ನು ಹೊತ್ತೊಯ್ದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಮೂರ್ಬಾಂದ್ ಬೆಟ್ಟದ ಬಳಿ ನಿನ್ನೆ ಸಂಜೆ ಸಾಯಂಕಾಲ ನಡೆದಿದೆ. ಹುಲಿ ಹೊತ್ತೊಯ್ದ ಮಹಿಳೆಯ ಮೃತದೇಹ ಅರಣ್ಯ ವೀಕ್ಷಣೆಯ ಟವರ್ ಮೇಲೆ ಇಂದು ಬೆಳಗ್ಗೆ ದೊರೆತಿದ್ದು, ಕುಟುಂಬದವರ ಅಕ್ರಂದನ ಮುಗಿಲುಮುಟ್ಟಿದೆ.
ಎನ್.ಬೇಗೂರು ಸಮೀಪದ ಮಾಳದ ಹಾಡಿ ನಿವಾಸಿ ಚಿಕ್ಕಿ (೪೮) ಹುಲಿ ದಾಳಿಗೆ ಸಿಲುಕಿ ಮೃತಪಟ್ಟವರು. ಮೂರ್ಬಾಂದ್ ಬೆಟ್ಟದ ಸಮೀಪ ಮೇಕೆ ಮೇಯಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಮಹಿಳೆಯೊಂದಿಗೆ ಕುರಿ ಮೇಯಿಸುತ್ತಿದ್ದ ಸಹಚರ ಗ್ರಾಮಕ್ಕೆ ತೆರಳಿ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಎನ್.ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಂಜೆ ಮೃತದೇಹಕ್ಕಾಗಿ ಹುಡುಕಾಟ ನಡೆದರೂ ಕತ್ತಲು ಆವರಿಸಿದ್ದರಿಂದ ಸಿಕ್ಕಿರಲಿಲ್ಲ. ಬಳಿಕ ಭಾನುವಾರ ಬೆಳಗ್ಗೆ ಅರಣ್ಯ ವೀಕ್ಷಣೆಯ ಟವರ್ ಮೇಲೆ ಶವ ಪತ್ತೆಯಾಗಿದೆ. ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.