ವಾರದಲ್ಲಿ ಎರಡು ಕೊಲೆ ಹಂತಕ ಸೆರೆ
ಬೆಂಗಳೂರು,ಮೇ.೨೬- ಒಂದೇ ವಾರದಲ್ಲಿ ಎರಡು ಕೊಲೆ ಮಾಡಿದ್ದ ನಟೋರಿಯಸ್ ಕೊಲೆಗಾರನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿಯ ಗಿರೀಶ್ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಗಿರೀಶ್ ಒಂದೇ ವಾರದಲ್ಲಿ ಎರಡು ಕೊಲೆ ಮಾಡಿದ್ದು, ಕುಡಿದು ಬಂದು ರಸ್ತೆ ಬದಿ ಮಲಗಿದ್ದವರನ್ನು ಆರೋಪಿ ಗಿರೀಶ್ ಕೊಲೆ ಮಾಡುತ್ತಿದ್ದನು. ಕುಡಿದ ಮತ್ತಿನಲ್ಲಿ ಮೇ ೧೨ರಂದು ಜಯನಗರ ೭ನೇ ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದನು. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತೆ ಮೇ ೧೮ರಂದು ಸಿಟಿ ಮಾರ್ಕೆಟ್ ಹಿಂಭಾಗದ ಕಾಂಪ್ಲೆಕ್ಸ್‌ನಲ್ಲಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದನು. ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಾಗಿ ಎರಡೂ ಠಾಣೆ ಪೊಲೀಸರು ಬಲೆ ಬೀಸಿದ್ದರು. ಇದೀಗ ಬನಶಂಕರಿ ಠಾಣೆ ಪೊಲೀಸರು ಆರೋಪಿ ಗಿರೀಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡ್ರಗ್ ಪೆಡ್ಲರ್ ಸೆರೆ:
ನಗರದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಡ್ರಗ್ ಪೆಡ್ಲರ್ ರೂಪೇಶ್‌ನನ್ನು ಬಂಧಿಸಿದ್ದಾರೆ. ಆರೋಪಿ ರೂಪೇಶ್ ಆಫ್ರಿಕಾ, ನೈಜೀರಿಯನ್ ಪೆಡ್ಲರ್‌ಗಳಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದನು. ಬಳಿಕ ನಗರದಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದನು. ಇದನ್ನು ತಿಳಿದ ಪೊಲೀಸರು ಆರೋಪಿ ರೂಪೇಶ್‌ನನ್ನು ಬಂಧಿಸಿದ್ದಾರೆ. ಬಂಧಿತನಿಂದ ೧೨೦ ಗ್ರಾಂ ಸಿಂಥೆಟಿಕ್ ಡ್ರಗ್, ಎಮ್‌ಡಿಎಮ್‌ಎ ವಶಕ್ಕೆ ಪಡೆದುಕೊಳ್ಳಲಾಗಿದೆ.