ಪೊಲೀಸ್ ಠಾಣೆ ಧ್ವಂಸ
ಡಿವೈಎಸ್ಪಿ, ಇನ್ಸ್‌ಪೆಕ್ಟರ್ ಸಸ್ಪೆಂಡ್
(ಸಂಜೆವಾಣಿ ಪ್ರತಿನಿಧಿಯಿಂದ)
ದಾವಣಗೆರೆ,ಮೇ೨೫:ಮಟ್ಕಾ ಆಡಿದ ಆರೋಪದ ಮೇಲೆ ಪೊಲೀಸ್ ಆಣೆಗೆ ಕರೆತಂದಿದ್ದ ಆದಿಲ್ (೩೨) ಎಂಬ ಆರೋಪಿ
ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದರಿಂದ ಉದ್ರಿಕ್ತಗೊಂಡ ಆರೋಪಿಯ ಸಂಬಂಧಿಕರು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಿ ಠಾಣೆಯೊಳಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿ ಪೊಲೀಸ್ ವಾಹನಗಳನ್ನೂ ಹಾನಿ ಮಾಡಿರುವ ಘಟನೆ ನಿನ್ನೆ ರಾತ್ರಿ ದಾವಣಗೆರೆಯ ಚನ್ನಗಿರಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್‌ರನ್ನು ಸಸ್ಪಂಡ್ ಮಾಡಲಾಗಿದೆ.
ಈ ಘಟನೆಯಲ್ಲಿ ೧೧ ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲ್ಲು ತೂರಾಟದಿಂದ ೫ ಪೊಲೀಸ್ ವಾಹನಗಳು ಜಖಂಗೊಂಡಿದ್ದು, ಪೊಲೀಸ್ ಠಾಣೆಯ ಕಿಟಕಿ ಗಾಜು ಹಾಗೂ ಪೀಠೋಪಕರಣಗಳು ಹಾನಿಯಾಗಿವೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಬಿಗುವಿನ ವಾತಾವರಣ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಚನ್ನಗಿರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನ್ನು ನಿಯೋಜಿಸಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ನಡೆದಿರುವ ದಾಳಿ ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಕೆಜೆ ಹಳ್ಳಿ ಪೊಲೀಸ್ ಠಾಣೆಯ ಮೇಲಿನ ದಾಳಿಯನ್ನು ನೆನಪಿಸಿದೆ.
ಘಟನೆ ಹಿನ್ನೆಲೆ
ಮಟ್ಕಾ ಆಡಿದ ಆರೋಪದ ಮೇಲೆ ಚನ್ನಗಿರಿಯ ಟಿಪ್ಪು ನಗರದ ನಿವಾಸಿ ಆದಿಲ್ (೩೨) ಎಂಬಾತನನ್ನು ಚನ್ನಗಿರಿ ಪೊಲೀಸ್ ಠಾಣೆಗೆ ಕರೆತರಲಾಯಿತು. ಹಠಾತನೆ ಆತನಿಗೆ ರಕ್ತದೊತ್ತಡ ಕಡಿಮೆಯಾಗಿ ಪೊಲೀಸ್ ಠಾಣೆಯಲ್ಲಿ ಕುಸಿದು ಬಿದ್ದರು.
ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಇದಾದ ಬಳಿಕ ಠಾಣೆಯ ಮುಂದೆ ಜಮಾಯಿಸಿದ ವ್ಯಕ್ತಿಯ ಸಂಬಂಧಿಕರು, ಒಳನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದರು. ಜೀಪ್ ಹಾನಿಗೊಳಿಸಿದರು. ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್, ಅಧಿಕಾರಿಗಳು ಸಂಬಂಧಿಕರನ್ನು ಸಮಾಧಾನಪಡಿಸಿದರು. ಆದರೆ ಪ್ರತಿಭಟನಾಕಾರರು ಯಾರ ಮಾತನ್ನು ಕೇಳಲಿಲ್ಲ. ಇದೊಂದು ಲಾಕಪ್ ಡೆತ್ ಎಂದು ಆರೋಪಿಸಿದ ಗುಂಪುವೊಂದು ಪೊಲೀಸ್ ಠಾಣೆಗೆ ನುಗ್ಗಿ, ಕಲ್ಲು ತೂರಾಟ ನಡೆಸಿ ಪೀಠೋಪಕರಣ ಧ್ವಂಸಗೊಳಿಸಿದ್ದಾರೆ.
ಪಟ್ಟಣದ ಟಿಪ್ಪು ನಗರದ ನಿವಾಸಿ ಆದಿಲ್(೩೨) ಎಂಬಾತ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ. ಒಸಿ ಆಡಿಸುತ್ತಿದ್ದ ಎಂಬ ಆರೋಪ ಇತ್ತು. ಶುಕ್ರವಾರ ರಾತ್ರಿ ೮.೩೦ರ ಸುಮಾರಿಗೆ ಚನ್ನಗಿರಿ ಠಾಣೆ ಪೊಲೀಸರು ವಿಚಾರಣೆಗಾಗಿ ಕರೆ ತಂದಿದ್ದರು. ಕೆಲ ಹೊತ್ತಿನ ಬಳಿಕ ಆದಿಲ್ ಕುಸಿದು ಬಿದ್ದಿದ್ದಾನೆ . ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಆದಿಲ್‌ಗೆ ಫಿಟ್ಸ್, ಲೋ ಬಿಪಿ ಆಗಿದ್ದರಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಕುಟುಂಬಸ್ಥರು ಪೊಲೀಸರು ಹೊಡೆದು ಹತ್ಯೆ ಮಾಡಿದ್ದಾರೆ. ಇದು ಲಾಕಪ್ ಡೆತ್ ಎಂದು ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಕಲ್ಲು ತೂರಿ, ಪಿಠೋಪಕರಣ ಧ್ವಂಸ ಮಾಡುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಸಿಡಿಸಿ, ಲಘು ಲಾಠಿ ಪ್ರಹಾರ ನಡೆಸಲಾಗಿದೆ.ತಡರಾತ್ರಿ ಠಾಣೆ ಎದುರು ಜಮಾಯಿಸಿ ಆದಿಲ್ ಮೃತದೇಹವಿಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.. ಕಲ್ಲು ತೂರಾಟಕ್ಕೆ ಮೂರು ಪೊಲೀಸ್ ಜೀಪ್ ಗಳಿಗೆ ಹಾನಿ ಮಾಡಲಾಗಿದೆ. ಬಂದೋಬಸ್ತ್‌ಗೆ ಬಂದಿದ್ದ ಮಾಯಕೊಂಡ ಠಾಣೆ ಇನ್ಸ್ ಪೆಕ್ಟರ್ ಜೀಪನ್ನು ಧ್ವಂಸ ಮಾಡಿದ್ದಾರೆ. ಠಾಣೆಯ ಕಿಟಕಿ ಗಾಜುಗಳ ಒಡೆದು ಹಾಕಿದ್ದು, ಠಾಣೆ ಎದುರಿದ್ದ ಧ್ವಂಜ ಸ್ಥಂಭವನ್ನು ಕಿತ್ತೆಸೆದಿದ್ದಾರೆ. ಠಾಣೆಯೊಳಗೆ ನುಗ್ಗಿ ಅಲ್ಲಿನ ಪೀಠೋಪಕರಣ ಮುರಿದಿದ್ದಾರೆ.
ಈ ವೇಳೆ ಪೊಲೀಸರು ಅಶ್ರುವಾಯು ಸಿಡಿಸಿ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಮುಖ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ಉಮಾಪ್ರಶಾಂತ್, ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ಬೇರೆ ಜಿಲ್ಲೆಯ ಪೊಲೀಸರು ಆಗಮಿಸಿದ್ದು, ಬಿಗಿ-ಬಂದೋಬಸ್ತ್ ಕೈಗೊಳ್ಳಲಾಗಿದೆ.
ಎಸ್ಪಿ ಉಮಾಪ್ರಶಾಂತ್ ಹೇಳಿಕೆ
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಿನ್ನೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿರುವ ದಾವಣಗೆರೆ ಜಿಲ್ಲಾ ಎಸ್ಪಿ ಉಮಾಪ್ರಶಾಂತ್ ಮಾಹಿತಿ ನೀಡಿ ನಿನ್ನೆ ಚನ್ನಗಿರಿ ಪೊಲೀಸರು ಆದಿಲ್‌ನನ್ನು ಕರೆತಂದಿದ್ದರು.ಆದಿಲ್ ಕುಸಿದು ಬಿದ್ದಿದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿರುವುದು ಗೊತ್ತಾಯಿತು.ಪೊಲೀಸ್ ಠಾಣೆಯಲ್ಲಿ ೬ ರಿಂದ ೭ ನಿಮಿಷ ಕೂಡ ಆರೋಪಿ ಇರಲಿಲ್ಲ,ಆದರೆ ಸಂಬಂಧಿಕರು ಲಾಕಪ್‌ಡೆತ್ ಎಂದು ಹೇಳುತ್ತಿದ್ದಾರೆ,ನಮ್ಮಲ್ಲಿ ಕೂಡ ಸಿಸಿ ಕ್ಯಾಮರಾ ಇದೆ.ಎಲ್ಲವನ್ನು ಪರಿಶೀಲನೆ
ಮಾಡಲಾಗುತ್ತದೆ.ಪಾರದರ್ಶಕ ತನಿಖೆ ನಡೆದಿದೆ. ಮೃತನ ತಂದೆ ಖರೀಂವುಲ್ಲಾ ದೂರು ಕೊಟ್ಟಿದ್ದಾರೆ.ಮೃತದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಗಂಭೀರ ಪ್ರಕರಣ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲೇ ಶವಪರೀಕ್ಷೆ ಮಾಡಲಾಗುವುದು ಎಂದರು.
ಪೊಲೀಸ್ ಸಿಬ್ಬಂದಿ ಗಾಯ,ವಾಹನಗಳಿಗೆ ಜಖಂ
ಆರೋಪಿ ಮೃತಪಟ್ಟಿದ್ದರಿಂದ ಆತನ ಸಂಬಂಧಿಕರು ಪೊಲೀಸ್‌ಠಾಣೆ ಮೇಲೆ ಕಲ್ಲು ತೂರಿ ಗಲಾಟೆ ಮಾಡಿದ್ದಾರೆ. ಇದರಿಂದ ೧೧ ಪೊಲೀಸರು ಗಾಯಗೊಂಡಿದ್ದು ೫ ಪೊಲೀಸ್ ವಾಹನಗಳಿಗೆ ಜಖಂ ಆಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ ಎಂದು ಎಸ್ಪಿ ಉಮಾಪ್ರಶಾಂತ್ ಹೇಳಿದರು.
ಲಾಕಪ್‌ಡೆತ್ ಅಲ್ಲ:ಸಿಎಂ
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬ ಮೃತಪಟ್ಟಿರುವುದು ಲಾಕಪ್ ಡೆತ್ ಅಲ್ಲ. ಆತನಿಗೆ ಮೂರ್ಛೆ ರೋಗ ಇತ್ತು. ಆ ರೋಗದಿಂದ ಆತ ಮೃತಪಟ್ಟಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್‌ಐಆರ್ ಇಲ್ಲದೆ ಆ ವ್ಯಕ್ತಿಯನ್ನು ಪೊಲೀಸ್ ಠಾಣೆಗ ಕರೆತಂದಿದ್ದು ತಪ್ಪು. ಆ ತಪ್ಪಿಗಾಗಿ ಪೊಲೀಸ್ ಅಧಿಕಾರಿಗಳ ಅಮಾನತ್ತಿಗೆ ಆದೇಶ ಮಾಡಿದ್ದೇನೆ. ಆದರೆ ಇದು ಲಾಕಪ್‌ಡೆತ್ ಅಲ್ಲ ಎಂದರು.
ತಮ್ಮ ಪುತ್ರ ರಾಕೇಶ್ ಸಿದ್ಧರಾಮಯ್ಯ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಮಗ ಸತ್ತು ಹೋಗಿ ೮ ವರ್ಷ ಆಗಿ ಹೋಗಿದೆ. ಈಗ ಆ ವಿಚಾರವನ್ನು ಯಾವುದಕ್ಕೋ ಲಿಂಕ್ ಮಾಡಿ ಮಾತನಾಡುವುದು ಮೂರ್ಖತನ. ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿ ಓಡಿ ಹೋಗಿರುವುದು ಅದಕ್ಕೂ ೨೦೧೬ ರಲ್ಲಿ ಮೃತಪಟ್ಟ ರಾಕೇಶ್ ಸಿದ್ಧಱಾಮಯ್ಯ ವಿಷಯಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ನನಗೆ ಉತ್ತರ ಬರಲಿಲ್ಲ. ಕೇಂದ್ರಕ್ಕೆ ತಡವಾಗಿ ಪತ್ರ ಬಂತು ಎಂಬ ಕೇಂದ್ರ ಸಚಿವರ ಹೇಳಿಕೆ ಸರಿಯಲ್ಲ. ನಾನು ೧೫ ದಿನಗಳ ಹಿಂದೆಯೇ ಪತ್ರ ಬರೆದಿದ್ದೇನೆ. ಸುಮ್ಮನೆ ಕಾಲ ಕಳೆಯುವುದು ಬಿಟ್ಟು ಪಾಸ್‌ಪಾರ್ಟ್ ರದ್ದತಿಗೆ ಕೇಂದ್ರ ಮುಂದಾಗಬೇಕು ಎಂದರು.
ಅತ್ಯಾಚಾರಕ್ಕಿಂತ ವಿಡಿಯೋ ಹಂಚಿದ್ದು ದೊಡ್ಡ ಅಪರಾಧ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆಯೂ ಟೀಕಿಸಿದ ಅವರು, ದೊಡ್ಡ ಅಪರಾಧ ಎಂಬುದು ಯಾವ ಕಾನೂನಲ್ಲಿದೆ. ಕುಮಾರಸ್ವಾಮಿ ಏನಾದರೂ ಸೆಕ್ಷನ್ ಹೇಳಿದ್ದಾರಾ ಅದೂ ಭಾರತೀಯ ದಂಡ ಸಂಹಿತೆಯಲ್ಲಿದೆಯಾ ಅಥವಾ ಇವರೇ ಬರೆದುಕೊಂಡಿರುವ ಕಾನೂನಿನಲ್ಲಿದೆ ಎಂದು ಪ್ರಶ್ನಿಸಿ, ನಾನು ವಿಡಿಯೋ ವಿತರಣೆಯನ್ನು ಸಮರ್ಥನೆ ಮಾಡುತ್ತಿಲ್ಲ. ಆದರೆ ಅತ್ಯಾಚಾರಕ್ಕಿಂತ ವಿಡಿಯೋ ಹಂಚಿದ್ದೆ ಮಹಾ ಅಪರಾಧ ಎನ್ನುವುದು ಸರಿಯಲ್ಲ ಎಂಬುದು ತಮ್ಮ ಮಾತಿನ ತಾತ್ಪರ್ಯ ಎಂದು ಸಿದ್ಧರಾಮಯ್ಯ ಹೇಳಿದರು.
ತಪ್ಪಿತಸ್ಥರ ವಿರುದ್ಧ ಕ್ರಮ:ಪರಂ
ಚನ್ನಗಿರಿ ಲಾಕಪ್‌ಡೆತ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಆರೋಪಿಯ ಮರಣೋತ್ತರ ಪರೀಕ್ಷೆ ಬಂದ ನಂತರ ಸತ್ಯಾಂಶ ಗೊತ್ತಾಗಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಕರೆತಂದಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಆದಿಲ್ ಎಂಬಾತನ ವಿರುದ್ಧ ದೂರು ಇತ್ತು ದೂರಿನ ಆಧಾರದ ಮೇಲೆ ಪೊಲೀಸ್ ಠಾಣೆಗೆ ಆತನನ್ನು ಕರೆತರಲಾಯಿತು ಠಾಣೆಗೆ ಬಂದ ೭ ನಿಮಿಷದಲ್ಲೇ ಆತನ ಆರೋಗ್ಯದಲ್ಲಿ ಏರುಪೇರಾಗಿ ಆತ ಸಾವನ್ನಪ್ಪಿದ್ದಾನೆ. ಆತನ ಸಂಬಂಧಿಕರು ಕಲ್ಲು ತೂರಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದಾರೆ.
ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ ಎಂದರು.
ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸತ್ಯಾಂಶ ಗೊತ್ತಾಗಲಿದೆ. ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಗೃಹ ಸಚಿವರು ಹೇಳಿದರು.