ಭಾರತ-ಚೀನಾ ಗಡಿ ವಿವಾದ ಶೇ.೭೫ ರಷ್ಟು ಬಗೆಹರಿದಿದೆ
ನವದೆಹಲಿ,ಸೆ.೨೫-ಚೀನಾ ಜೊತೆಗಿನ ಭಾರತದ ಗಡಿ ವಿವಾದಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದ ಶೇ.೭೫ರಷ್ಟು ಸಮಸ್ಯೆಗಳು ಬಗೆಹರಿದಿವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಇದರೊಂದಿಗೆ ಚೀನಾ ಜತೆಗಿನ ಸಂಬಂಧಕ್ಕೆ ಸಂಬಂಧಿಸಿದಂತೆ ಮುಂದಿನ ಹೆಜ್ಜೆಯ ಬಗ್ಗೆಯೂ ಇಂದು ಮಾಹಿತಿ ನೀಡಿದ್ದಾರೆ.
ಇಲ್ಲಿನ ಏಷ್ಯಾ ಸೊಸೈಟಿ ಪಾಲಿಸಿ ಸಂಸ್ಥೆಯಲ್ಲಿ ಏಷ್ಯಾ ಸೊಸೈಟಿಯನ್ನುದ್ದೇಶಿಸಿ ಮಾತನಾಡಿದ ಡಾ.ಎಸ್.ಜೈಶಂಕರ್ ಈ ವಿಷಯ ತಿಳಿಸಿದರು. ಭಾರತದಲ್ಲಿರುವ ಚೀನಾ ರಾಯಭಾರಿ ಕ್ಸು ಫೀಹಾಂಗ್ ಕೂಡ ಅಲ್ಲಿ ಉಪಸ್ಥಿತರಿದ್ದರು. ಚೀನಾ ರಾಯಭಾರಿ ಸಮ್ಮುಖದಲ್ಲಿ ಜೈಶಂಕರ್ ಮಾತನಾಡಿ, ನಾನು ಶೇ.೭೫ರಷ್ಟು ಸಮಸ್ಯೆ ಬಗೆಹರಿದಿದೆ ಎಂದಾಗ ಸೇನೆ ಮಾತ್ರ ವಾಪಸ್ ಬಂದಿದೆ ಎಂದರ್ಥ. ಆದ್ದರಿಂದ, ಇದು ಸಮಸ್ಯೆಯ ಭಾಗವಾಗಿದೆ. ಪೆಟ್ರೋಲಿಂಗ್‌ಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಇನ್ನೂ ಪರಿಹರಿಸಬೇಕಾಗಿದೆ. ಮುಂದಿನ ಹಂತವು ಒತ್ತಡವನ್ನು ಕಡಿಮೆ ಮಾಡುವುದು ಎಂದು ವಿದೇಶಾಂಗ ಸಚಿವರು ಒತ್ತಿ ಹೇಳಿದ್ದಾರೆ,
ಚೀನಾ ಮತ್ತು ಭಾರತದ ನಡುವಿನ ಉತ್ತಮ ಬಾಂಧವ್ಯವು ಏಷ್ಯಾದ ಭವಿಷ್ಯಕ್ಕೆ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ಆದರೆ ಅಂತಾರಾಷ್ಟ್ರೀಯ ಅಸ್ಥಿರತೆಯನ್ನು ಎದುರಿಸಲು ಭಾರತ ಸಿದ್ಧವಾಗಿರಬೇಕು ಎಂದು ತಿಳಿಸಿದ್ದಾರೆ.
ಭಾರತ-ಚೀನಾ ನಡುವೆ ಒಂದು ಸಂಕೀರ್ಣ ಇತಿಹಾಸವಿದೆ ಎಂದು ಹೇಳಿದ್ದಾರೆ.
ಇದರೊಂದಿಗೆ ಅವರು ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನಾದ ತಪ್ಪುಗಳನ್ನು ಪಟ್ಟಿ ಮಾಡಿದ್ದಾರೆ. . ಚೀನಾ ಮತ್ತು ಭಾರತದ ನಡುವಿನ ಸ್ಪಷ್ಟ ಒಪ್ಪಂದಗಳ ಹೊರತಾಗಿಯೂ, ಕೋವಿಡ್ ಸಮಯದಲ್ಲಿ ಡ್ರ್ಯಾಗನ್ ಪಡೆಗಳು ಗಡಿರೇಖೆಯ ಬಳಿ ಉಲ್ಲಂಘನೆ ಮಾಡಿದೆ ಇದರಿಂದಾಗಿ ಅಹಿತಕರ ಘಟನೆಗಳು ಜರುಗಿದೆ ಎರಡೂ ಕಡೆಯ ಹಲವು ಯೋಧರು ಹುತಾತ್ಮರಾಗಿದ್ದಾರೆ ಎಂದು ಹೇಳಿದ್ದಾರೆ.
ಇದು ಒಂದು ರೀತಿಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.