ಸಿದ್ದರಾಮಯ್ಯನವರ ಪರ ನಾವೆಲ್ಲರೂ ನಿಲ್ಲುತ್ತೇವೆ; ಎಸ್ ಎಸ್ ಮಲ್ಲಿಕಾರ್ಜುನ್
ಸಂಜೆವಾಣಿ ವಾರ್ತೆ
ದಾವಣಗೆರೆ, ಸೆ.24; ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ತಡೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾ ಆದರೇನಂತೆ? ಸುಪ್ರೀಂ ಕೋರ್ಟ್‌ ಇದೆ. ನಾವು ಅಲ್ಲಿಗೆ ಹೋಗುತ್ತೇವೆ ಎಂದು ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ನಲ್ಲಿ ವಜಾ ಆದರೇನಂತೆ, ಸುಪ್ರೀಂ ಕೋರ್ಟ್ ಇದೆ. ಅಲ್ಲಿಗೆ ಹೋಗುತ್ತೇವೆ. ಅದರ ಬಗ್ಗೆ ಯಾವುದೇ ಅನುಮಾನ ಬೇಡ, ನಾವು ಫೈಟ್ ಮಾಡುತ್ತೇವೆ. ನಾವು ಸ್ವಚ್ಛವಾಗಿದ್ದೇವೆ.
ಪ್ರಾಮಾಣಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ ಎಂದರು. ಸಿದ್ದರಾಮಯ್ಯನವರ ಪರ ನಾವೆಲ್ಲರೂ ನಿಲ್ಲುತ್ತೇವೆ. ಬುಧವಾರದ ಬೆಳಿಗ್ಗೆ ಕ್ಯಾಬಿನೆಟ್ ಸಭೆ ಇದೆ. ಅಲ್ಲಿ ನಾವು ಚರ್ಚೆ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೆ, ನಾವು ಕೇ‍ಳಿದವರ ವಿರುದ್ಧ ಪ್ರಾಸಿಕ್ಯೂಷನ್ ಜಾರಿ ಮಾಡಿಲ್ಲ. ಕೇವಲ ಕಾಂಗ್ರೆಸ್ಸಿನವರ ವಿರುದ್ಧ ಮಾತ್ರವೇ ಪ್ರಾಸಿಕ್ಯೂಷನ್ ಜಾರಿ ಮಾಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಹಿಂದೆ 5 ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ಈಗ ಮತ್ತೆ ಹೆಚ್ಚಿನ ರೀತಿ, ಬಡವರಿಗೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ.
ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ರಾಜ್ಯಪಾಲರು ಮಾಡಿರುವ ದುರಂತ ಇದು. ಇವತ್ತು ಸ್ವಲ್ಪ ಜನಕ್ಕೆ ಮತ್ತೆ ನೋಟೀಸ್ ಕೊಟ್ಟಿದ್ದಾರೆ. ನಾವು ಕೇಳಿದವರಿಗೆ ಮಾತ್ರ ನೋಟೀಸ್ ಕೊಡಲ್ಲ. ಯಾರೇ ಅರ್ಜಿ ಕೊಟ್ಟರೂ ಕಾಂಗ್ರೆಸ್ಸಿನವರಿಗೆ ನೋಟೀಸ್ ನೀಡುವ ಸಂಸ್ಕೃತಿ ಆರಂಭವಾಗಿದೆ ಈಗ ಎಂದು ಅವರು ವ್ಯಂಗ್ಯವಾಡಿದರು.
ನಮ್ಮ ಮುಖ್ಯಮಂತ್ರಿಗೆ ಒಳ್ಳೆಯ ಎದೆಗಾರಿಕೆ ಇದೆ. ನಾವು ಫೇಸ್ ಮಾಡುತ್ತೇವೆ. ನಾವು ಜಯಶೀಲರಾಗಿ ಬರುತ್ತೇವೆ. ಸದ್ಯಕ್ಕೆ ನೀವೇನೂ ಕ್ರಿಯೇಟ್ ಮಾಡಬೇಡಿ. ಈಗಲೂ ನಮಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ. ಕಪ್ಪು ಚುಕ್ಕೆ ತರುವ ಕೆಲಸ ಮಾಡಿದ್ದಾರೆ. ಏನೂ ಆಗುವುದಿಲ್ಲ. ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಅಲ್ಲಿ ಜಯಶೀಲರಾಗುತ್ತೇವೆ ಎಂದು ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ ತಿಳಿಸಿದರು.
ದಾವಣಗೆರೆಯಲ್ಲಿ 1991-92ರಿಂದಲೂ ಶಾಂತಿ, ಸಾಮರಸ್ಯ ಕಾಪಾಡಿಕೊಂಡು ಬಂದಿದ್ದು, ಯಾರೇ ಕಿಡಿಗೇಡಿಗಳು ಇದಕ್ಕೆ ಭಂಗ ತರಲು ಪ್ರಯತ್ನಿಸಿದರೆ ಜಿಲ್ಲಾಡಳಿತ ನಾವು ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಅಂತಹವರನ್ನು ಮುಖಾಮುಲಾಜಿಲ್ಲದೇ ಒಳಗೆ ಹಾಕುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಎಚ್ಚರಿಸಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಎಲ್ಲರೂ ಒಳ್ಳೆಯ ರೀತಿಯಿಂದ ಹಬ್ಬ ಮಾಡುವಂತೆ ಹೇಳುತ್ತೇವೆ. ಘಟನೆಯು ಸ್ವಲ್ಪಹೊಗೆಯಾಡುತ್ತಿರುವಾಗಲೇ ಬೆಂಕಿ ಕೆರೆಯುವುದು, ಸೀಮೆಣ್ಣೆ ಹಾಕುವುದು ಯಾರೂ ಮಾಡಬಾರದು. ಯಾರೇ ಕಿಡಿಗೇಡಿಗಳೂ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ತಂದರೆ ಕಠಿಣ ಕ್ರಮ ನಿಶ್ಚಿತ ಎಂದು ಅವರು ಪುನರುಚ್ಛರಿಸಿದರು.