ಮರ್ಯಾದಾ ಹತ್ಯೆಗೆ ಹೆತ್ತ ತಾಯಿಯೇ ಕುಮ್ಮಕ್ಕು
ಸಂಭಾಲ್,ಸೆ.೨೫-ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮರ್ಯಾದಾ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಅಪಮಾನದ ಭೀತಿಯಿಂದ ಬಾಲಕಿಯ ಮನೆಯವರು ಆಕೆಯನ್ನು ಕೊಲೆ ಮಾಡಿರುವುದು ಪೋಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಮೊದಲು ಅತ್ಯಾಚಾರ ಆರೋಪಿಗಳಿಂದ ಕೊಲೆ ನಡೆದಿದೆ ಎನ್ನಲಾಗಿತ್ತು. ಆದರೆ ಇದೀಗ ಬಾಲಕಿಯ ಕುಟುಂಬದವರೇ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕೊಲೆಗೆ ಆಕೆಯ ಹೆತ್ತ ತಾಯಿಯೇ ಯೋಜನೆ ರೂಪಿಸಿದ್ದಾಳೆ. ಕೊಲೆಯಾದ ಸಂದರ್ಭದಲ್ಲಿ ೧೭ ವರ್ಷದ ಅಪ್ರಾಪ್ತ ಬಾಲಕಿ ತನ್ನ ತಾಯಿ ಮತ್ತು ಸಹೋದರನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ದಾರಿಯಲ್ಲಿ ಕಾರಿನಲ್ಲಿ ಬಂದವರು ತಮ್ಮ ಮೇಲೆ ದಾಳಿ ಮಾಡಿ ಮತ್ತು ಬಾಲಕಿಗೆ ಮೂರು ಬಾರಿ ಗುಂಡು ಹಾರಿಸಿದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಇದರಲ್ಲಿ ಅತ್ಯಾಚಾರ ಆರೋಪಿ ರಿಂಕುನನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿತ್ತು.
ಈ ಎಲ್ಲ ಘಟನೆಯ ನಂತರ ಪೊಲೀಸರು ಬಾಲಕಿ ಕುಟುಂಬದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಆಗ ಬಾಲಕಿಯ ತಾಯಿಯೇ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ ಎಂಬ ಸತ್ಯ ವಿಚಾರಣೆ ವೇಳೆ ತಿಳಿದು ಬಂದಿದೆ.
ಅತ್ಯಾಚಾರ ಪ್ರಕರಣದಲ್ಲಿ ರಿಂಕು ವಿರುದ್ಧ ಬಾಲಕಿ ಸಾಕ್ಷಿ ಹೇಳುವುದಿಲ್ಲ, ಇದು ಕುಟುಂಬಕ್ಕೆ ಅವಮಾನ ತರುತ್ತದೆ ಎಂದು ತಾಯಿ ಮತ್ತು ಇತರ ಕುಟುಂಬ ಸದಸ್ಯರು ಭಾವಿಸಿ ಈ ಕೃತ್ಯ ನಡೆಸಿದ್ದಾರೆ.
ಈ ಹಿಂದೆ ಅಪ್ರಾಪ್ತ ಬಾಲಕಿ ರಿಂಕು ಜೊತೆ ಓಡಿ ಹೋಗಿದ್ದಾಳೆ. ಇದಾದ ನಂತರ ರಿಂಕು ಮೇಲೆ ಅತ್ಯಾಚಾರದ ಆರೋಪ ಹೊರಿಸಲಾಗಿದೆ.
ವಿಚಾರಣೆಯ ಸಮಯದಲ್ಲಿ, ಹುಡುಗಿಯ ತಾಯಿ ಇತ್ತೀಚೆಗೆ ಗಾಜಿಯಾಬಾದ್‌ನಿಂದ ಅವಳನ್ನು ಕರೆತಂದಿದ್ದಳು ಎನ್ನುವ ಮಾಹಿತಿ ಕಲೆಹಾಕಿದ ಪೋಲಿಸರು ಕೊಲೆಯಾದ ದಿನ, ಸಂಬಂಧಿಕರನ್ನು ಭೇಟಿಯಾಗಲು ಹೋಗಬೇಕೆಂದು ಬಾಲಕಿಯ ಮನವೊಲಿಸಿ ಕರೆ ತಂದಿದ್ದಾರೆ.ಇದಾದ ಬಳಿಕ ಬಾಲಕಿ, ಆಕೆಯ ತಾಯಿ ಹಾಗೂ ಸಹೋದರ ಬೈಕ್ ಮೇಲೆ ಕುಳಿತು ತೆರಳಿದ್ದಾರೆ. ಹುಡುಗಿಯ ತಾಯಿಯ ಚಿಕ್ಕಪ್ಪ ಆ ಮಾರ್ಗದಲ್ಲಿ ಲೋಡ್ ಮಾಡಿದ ಗನ್‌ನೊಂದಿಗೆ ಸಿದ್ಧವಾಗಿ ದಾರಿಯಲ್ಲಿ ಕಾಯುತ್ತಿದ್ದು ಬಾಲಕಿಯ ಕಂಡು ತಕ್ಷಣವೇ ಎದೆಗೆ ಮೂರು ಗುಂಡುಗಳನ್ನು ಹಾರಿಸಿದ್ದಾನೆ.
ದಾಳಿಯಲ್ಲಿ ಸಹೋದರ ಮತ್ತು ತಾಯಿಗೆ ಗಾಯವೂ ಆಗದ ಕಾರಣ ಪೊಲೀಸರಿಗೆ ಅನುಮಾನ ಬಂದಿದೆ., ಇದೀಗ ಪೊಲೀಸರು ತಾಯಿ ಮತ್ತು ಸಹೋದರರನ್ನು ವಶಕ್ಕೆ ತೆಗೆದುಕೊಂಡರು. ವಿಚಾರಣೆ ವೇಳೆ ಬಾಲಕಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.