ರಕ್ತಪಾತ ನಿಲ್ಲಿಸಿ ಮಮತಾಗೆ ರಾಜ್ಯಪಾಲರ ಪತ್ರ
ಕೋಲ್ಕತ್ತಾ,ಮೇ.೨೪-ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯೊಬ್ಬರನ್ನು ಬುಧವಾರ ರಾತ್ರಿ ಹತ್ಯೆ ಮಾಡಲಾಗಿದೆ. ಘಟನೆಯಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ.
ಘಟನೆಯ ಬಗ್ಗೆ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ್ ಬೋಸ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಖಂಡಿಸಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳುವಂತೆ ಮತ್ತು ಕ್ರಮ ಕೈಗೊಂಡ ವರದಿಯನ್ನು ಅವರಿಗೆ ಸಲ್ಲಿಸುವಂತೆ ಬೋಸ್ ಬ್ಯಾನರ್ಜಿಗೆ ಸೂಚಿಸಿದ್ದಾರೆ.
ಅಧಿಕೃತ ಪತ್ರದಲ್ಲಿ, ಬೋಸ್ ಅವರು ರಕ್ತಪಾತವನ್ನು ಕೊನೆಗೊಳಿಸುವಂತೆ ಮತ್ತು ಮುಖ್ಯಮಂತ್ರಿಗಳು ಎಂಸಿಸಿಯ ಮಾನದಂಡಗಳೊಳಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ನಂದಿಗ್ರಾಮದಲ್ಲಿ ರಾಜ್ಯ ಪ್ರಾಯೋಜಿತ ಹಿಂಸಾಚಾರದ ಬಗ್ಗೆ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಸಂವಿಧಾನದ ಉಲ್ಲಂಘನೆಯ ಯಾವುದೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಒತ್ತಿ ಹೇಳಿದ್ದಾರೆ.
ಕೂಡಲೇ ಕ್ರಮ ಕೈಗೊಂಡು ವರದಿ ಕಳುಹಿಸುವಂತೆ ಮುಖ್ಯಮಂತ್ರಿಗೆ ಸೂಚಿಸಿದರು. ಸಂವಿಧಾನದ ೧೬೭ನೇ ಪರಿಚ್ಛೇದದ ಪ್ರಕಾರ ರಾಜ್ಯಪಾಲರಿಗೆ ಹಕ್ಕು ಇದೆ ಎಂದು ಹೇಳಿದರು. ಸಂವಿಧಾನದ ಯಾವುದೇ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಕಾರ್ಯಕರ್ತರು ವಾಹನಗಳ ಟೈರ್ ಸುಟ್ಟು ರಸ್ತೆ ತಡೆ ನಡೆಸಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದರು. ಸೋಣಚೂರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತೆ ರಥಿಬಾಲಾ ಅರ್ಹಿ (೩೮) ಅವರನ್ನು ಟಿಎಂಸಿ ಬೆಂಬಲಿತ ಕ್ರಿಮಿನಲ್‌ಗಳು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಾಜ್ಯ ವಿರೋಧ ಪಕ್ಷದ ನಾಯಕ ಶುಭೇಂದು ಅಧಿಕಾರಿ ಸಂಸದರಾಗಿದ್ದ ನಂದಿಗ್ರಾಮ ಕ್ಷೇತ್ರಕ್ಕೆ ಮೇ ೨೫ ರಂದು ಮತದಾನ ನಡೆಯಲಿದೆ. ಮತದಾನಕ್ಕೂ ಮುನ್ನ ನಡೆದ ಹಿಂಸಾಚಾರದಿಂದ ರಾಜಕೀಯ ಬಿಸಿ ತಟ್ಟಿದೆ. ಹಿಂಸಾಚಾರದ ನಂತರದ ಪ್ರತಿಭಟನೆ ಮತ್ತು ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಭಾರೀ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ರಾಜ್ಯಪಾಲರು ಮಮತಾ ಸರ್ಕಾರಕ್ಕೆ ಪತ್ರ ಬರೆದಿದ್ದರೆ, ಟಿಎಂಸಿ ರಾಜ್ಯಪಾಲರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಸದ್ಯಕ್ಕೆ ಯಾರನ್ನೂ ಬಂಧಿಸಿಲ್ಲ.