ವಕೀಲೆ ಚೈತ್ರಾ ಆತ್ಮಹತ್ಯೆ ತನಿಖೆಯಲ್ಲಿ ಧೃಡ
ಬೆಂಗಳೂರು,ಮೇ.೨೪-ಕೆಲ ದಿನಗಳ ಹಿಂದೆ ಶಂಕಾಸ್ಪದವಾಗಿ ಮೃತಪಟ್ಟಿದ್ದ ಕೆಎಎಸ್ ಅಧಿಕಾರಿಯ ಪತ್ನಿ ಹೈಕೋರ್ಟ್ ವಕೀಲೆ ಚೈತ್ರಾ ಗೌಡ ಅವರದ್ದು ಆತ್ಮಹತ್ಯೆ ಎನ್ನುವುದು ಸಂಜಯನಗರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಚೈತ್ರಾ ಗೌಡ ಶಂಕಾಸ್ಪದ ಸಾವಿನ ಪ್ರಕರಣಕ್ಕೆ ಪುಷ್ಠಿಕೊಡುವಂತೆ ಡೆತ್ ನೋಟ್ ಸಹ ಪತ್ತೆ ಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೇ ೧೧ರಂದು ಸಂಜಯನಗರ ಅಣ್ಣಯ್ಯಪ್ಪ ಲೇ ಔಟ್‌ನಲ್ಲಿ ಚೈತ್ರಾ ಶವ ಪತ್ತೆಯಾಗಿದ್ದು,ಆಕೆಯ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಚೈತ್ರಾ ಪತಿ, ಕೆಎಎಸ್ ಅಧಿಕಾರಿ ಶಿವಕುಮಾರ್ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದರು.
ವಿಚಾರಣೆ ವೇಳೆ, ಪತ್ನಿಯೊಂದಿಗೆ ಯಾವುದೇ ವೈಷಮ್ಯ ಇರಲಿಲ್ಲ. ಜೊತೆಗೆ ಯಾವುದೇ ಹಣಕಾಸಿನ ಸಮಸ್ಯೆ ಕೂಡ ಇರಲಿಲ್ಲ ಎಂದು ಶಿವಕುಮಾರ್ ತಿಳಿಸಿದ್ದರು.ಆದರೆ ಆಸ್ತಿ ವಿಚಾರವಾಗಿ ಆಗಾಗ ಸ್ವಲ್ಪಮಟ್ಟಿಗೆ ಜಗಳ ನಡೆಯುತ್ತಿದ್ದರಿಂದ ಖಿನ್ನತೆಗೊಳಗಾಗಿದ್ದಳು ಎಂದು ಮಾಹಿತಿ ನೀಡಿದ್ದರು.
ಮರಣೋತ್ತರ ಪರೀಕ್ಷೆಯಲ್ಲೂ ಇದು ಆತ್ಮಹತ್ಯೆ ಎಂದು ಕಂಡುಬಂದಿದೆ. ಜೊತೆಗೆ ಮನೆಯಲ್ಲಿ ಸಿಕ್ಕ ಡೆತ್ ನೋಟ್ ಕೂಡ ಚೈತ್ರಾ ಬರೆದಿರುವುದು ಖಚಿತವಾಗಿದೆ. ಚೈತ್ರಾ, ತಮ್ಮ ಕುಟುಂಬಸ್ಥರ ಬಳಿ ಮೂರು ತಿಂಗಳ ಹಿಂದೆಯೇ ತಾವು ಸಾಯುವುದಾಗಿ ಮಾತಾಡಿದ್ದರು. ಈ ಮಾತಾಡಿದ ಬಳಿಕವೇ ಡೆತ್ ನೋಟ್ ಬರೆದಿಟ್ಟಿರುವುದು ಗೊತ್ತಾಗಿದೆ. ೧೦ ದಿನಗಳ ತನಿಖೆ ಬಳಿಕ ಹಿರಿಯ ಅಧಿಕಾರಿಗಳಿಗೆ ಸಂಜಯನಗರ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ:
ಕಳೆದ ೨೦೧೬ರಲ್ಲಿ ಮದುವೆ ಆಗಿದ್ದ ಶಿವಕುಮಾರ್ ಹಾಗೂ ಚೈತ್ರಾ ದಂಪತಿಗೆ ೫ ವರ್ಷದ ಒಂದು ಮಗುವಿದ್ದು, ದಂಪತಿಯು ಸಂಜಯನಗರದ ಅಣ್ಣಯ್ಯಪ್ಪ ಲೇ ಔಟ್‌ನಲ್ಲಿ ವಾಸವಾಗಿದ್ದರು. ಚೈತ್ರಾ ಹೈಕೋರ್ಟ್ ವಕೀಲೆ ಆಗಿದ್ದರೆ, ಶಿವಕುಮಾರ್ ಕೆಐಡಿಬಿಯಲ್ಲಿ ಉಪವಿಭಾಗಾಧಿಕಾರಿ ಆಗಿದ್ದರು. ಅಪಾರ್ಟ್‌ಮೆಂಟ್‌ನ ಮೂರು ಫ್ಲಾಟ್‌ನ ಒಂದರಲ್ಲಿ ಚೈತ್ರಾ ಕುಟುಂಬ ಹಾಗೂ ಇನ್ನೊಂದು ಫ್ಲಾಟ್‌ನಲ್ಲಿ ಮೃತಳ ತಮ್ಮ ವಾಸವಾಗಿದ್ದರು.ಮೇ.೧೧ರ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಪತಿ ಶಿವಕುಮಾರ್ ಜತೆ ನಂತರ ತಮ್ಮನನೊಟ್ಟಿಗೂ ಚೈತ್ರಾ ಮಾತನಾಡಿದ್ದಾರೆ. ೧೧ ಗಂಟೆ ಸುಮಾರಿಗೆ ಚೈತ್ರಾಳ ತಮ್ಮ ಕರೆದಾಗ ಸ್ಪಂದಿಸಿಲ್ಲ. ಹೀಗಾಗಿ ಕಿಟಕಿಯಲ್ಲಿ ನೋಡಿದಾಗ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಚೈತ್ರಾಳ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡೆತ್ ನೋಟ್ ಪತ್ತೆ:
ಚೈತ್ರಾರ ಬೆಡ್ ರೂಮಿನಲ್ಲಿ ಒಂದು ಪುಟದ ಡೆತ್ ನೋಟ್ ಪತ್ತೆಯಾಗಿದೆ. ಮೂರು ತಿಂಗಳ ಹಿಂದೆ ಅಂದರೆ ಮಾರ್ಚ್ ೧೧ರಂದು ಇದನ್ನು ಬರೆಯಲಾಗಿತ್ತು. ಡೆತ್‌ನೋಟ್‌ನಲ್ಲಿ, ನನ್ನ ಪತಿ ತುಂಬಾ ಒಳ್ಳೆಯವರು. ನೀವೂ ಜೀವನವನ್ನು ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಡಿಪ್ರೆಶನ್‌ನಿಂದ ಬಳಲುತ್ತಿದ್ದೇನೆ. ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಆದರೆ ಆಗುತ್ತಿಲ್ಲ, ನಾನು ನನ್ನ ಜೀವನವನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೆನೆ. ಮಗುವನ್ನು ಚೆನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ. ನಾನು ಸೂಸೈಡ್ ಮಾಡಿಕೊಳ್ಳುವುದು ತಪ್ಪು ಎಂದು ಗೊತ್ತಿದೆ. ಆದರೂ ಸಹ ಆತ್ಮಹತ್ಯೆಯನ್ನು ಮಾಡಿಕೊಂಡು ನನ್ನ ಜೀವನಕ್ಕೆ ಅಂತ್ಯವಾಡಿದ್ದೇನೆ ಎಂದು ಬರೆದಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲೂ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಂಜಯನಗರ ಪೊಲೀಸರು ನಡೆಸಿರುವ ವಿಸ್ತೃತ ತನಿಖೆಯ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ.