ಸರ್ಕಾರಿ ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್: ವೈದ್ಯರ ಪರದಾಟ
ಬೆಂಗಳೂರು, ಮೇ.೨೪- ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿರಂತರ ವಿದ್ಯುತ್ ಕಡಿತದಿಂದ ವೈದ್ಯಕೀಯ ಸಿಬ್ಬಂದಿ ತೀವ್ರ ತೊಂದರೆ ಎದುರಿಸುತ್ತಿರುವ ಸಂಗತಿ ಬಯಲಾಗಿದೆ.
೧೦೦ ಹಾಸಿಗೆಯ ಸೌಲಭ್ಯದ ಈ ಆಸ್ಪತ್ರೆಯಲ್ಲಿ ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯರು ಪರದಾಡುತ್ತಿದ್ದು, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ರೋಗಿಗಳನ್ನು ಆಸ್ಪತ್ರೆಯಲ್ಲಿ ಪರೀಕ್ಷಿಸಲು ಟಾರ್ಚ್‌ಗಳು, ಮೊಬೈಲ್ ಫೋನ್, ಟಾರ್ಚ್ ಮತ್ತು ಮೇಣದಬತ್ತಿ ಬಳಕೆ ಮಾಡುತ್ತಿದ್ದಾರೆ.
ಆಸ್ಪತ್ರೆಯ ಭೀಕರ ಪರಿಸ್ಥಿತಿ ಪ್ರದರ್ಶಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬೆಳಕು ಇಲ್ಲದೆ ರೋಗಿಗಳಿಗೆ ಸೂಕ್ತ ಆರೈಕೆ ಒದಗಿಸಲು ಸಿಬ್ಬಂದಿಗಳು ಹೆಣಗಾಡುತ್ತಿದ್ದಾರೆ.
ಸುಮಾರು ಒಂದು ವಾರದಿಂದ ಬ್ಯಾಕ್‌ಅಪ್ ಜನರೇಟರ್ ಕಾರ್ಯನಿರ್ವಹಿಸದೇ ಇರುವುದರಿಂದ ಆಸ್ಪತ್ರೆ ನಿರ್ವಹಣೆ ನಿರ್ಲಕ್ಷ್ಯದ ಆರೋಪಕ್ಕೆ ಗುರಿಯಾಗಿದೆ. ಈ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಆಸ್ಪತ್ರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ.
ಬಿಜೆಪಿ ಲೇವಡಿ
ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಕತ್ತಲೆ ಭಾಗ್ಯ ಕರುಣಿಸಿದೆ ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಪಕ್ಷ, ಒಂದು ವರ್ಷದ ಗ್ಯಾರಂಟಿ ಕತ್ತಲು ಭಾಗ್ಯ. ಇದು ವರ್ಷದ ಸಂಭ್ರಮಾಚರಣೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಉಡುಗೊರೆ ಇದು. ಸರ್ಕಾರ ಇಂದು ಆಸ್ಪತ್ರೆಗಳಿಗೂ ಕರೆಂಟ್ ಪೂರೈಸದಷ್ಟು ಹೀನಾಯ ಸ್ಥಿತಿಗೆ ಬಂದು ತಲುಪಿದೆ ಎಂದಿದೆ.
ರಾಜ್ಯದ ಖಜಾನೆ ಖಾಲಿ, ವಿದ್ಯುತ್ ಖಾಲಿ, ಇದು ಖಚಿತನೇ ಉಚಿತನೇ, ನಿಶ್ಚಿತನೇ ಚಿಪ್ಪು, ಚೊಂಬು ಎಂದು ತನ್ನದೇ ರೀತಿಯಲ್ಲಿ ವ್ಯಂಗವಾಗಿ ಟ್ವೀಟ್ ಮಾಡಿದೆ.