ಗಲ್ಲಿ ಕ್ರಿಕೆಟ್ ಜಗಳ ಮಾರಾಮಾರಿ ೮ ಮಂದಿಗೆ ಗಾಯ
ಬೆಳಗಾವಿ,ಮೇ.೨೪- ಗಲ್ಲಿ ಕ್ರಿಕೆಟ್ ಜಗಳ ಎರಡು ಗುಂಪುಗಳ ನಡುವೆ ಘರ್ಷಣೆ ವಿಕೋಪಕ್ಕೆ ತಿರುಗಿ ಉಂಟಾದ ಮಾರಾಮಾರಿಯಲ್ಲಿ ೮ ಮಂದಿ ಗಾಯಗೊಂಡ ಘಟನೆ ನಗರದ ಅಳ್ವಾನ್ ಗಲ್ಲಿಯಲ್ಲಿ ನಡೆದಿದೆ.
ಘರ್ಷಣೆ ವೇಳೆ ಕೆಲವರು ತಲ್ವಾರ್? ಪ್ರದರ್ಶಿಸಿರುವ ಆರೋಪವಿದ್ದು, ಸ್ಥಳದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಶಹಾಪುರ ಪೊಲೀಸ್ ಠಾಣೆಯ ಸಮೀಪದ ಅಳ್ವಾನ್ ಗಲ್ಲಿಯಲ್ಲಿ ಸಂಜೆ ೫ರ ಸುಮಾರಿಗೆ ಚಿಕ್ಕ ಮಕ್ಕಳ ನಡುವೆ ಕ್ರಿಕೆಟ್ ವಿಚಾರದಲ್ಲಿ ಗಲಾಟೆ ಆರಂಭವಾಗಿ ಗಲಾಟೆಯಲ್ಲಿ ಎರಡು ಗುಂಪಿನ ಯುವಕರು ಮಧ್ಯಪ್ರವೇಶಿಸಿದಾಗ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಡಿಕೊಂಡದ್ದಾರೆ.
ಹೊಡೆದಾಟದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಅಮರ್? ಸೇರಿ ೮ ಮಂದಿ ಗಾಯಗೊಂಡಿದ್ದು, ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಕೆಎಸ್‌ಆರ್‌ಪಿ, ಮೂರು ಮಂದಿ ಸಿಪಿಐ ನಿಯೋಜಿಸಲಾಗಿದೆ.
ತಲ್ವಾರ್ ಪ್ರದರ್ಶನ
ಒಂದು ಸಮುದಾಯದ ಮನೆಗಳ ಮೇಲೆ ಕಲ್ಲು ತೂರಿ ತಲ್ವಾರ್ ಪ್ರದರ್ಶಿಸಿರುವ ಬಗ್ಗೆ ಆರೋಪ ಕೇಳಿಬಂದಿದೆ. ಅಬ್ದುಲ್ ಎಂಬಾತ ನಡುರಸ್ತೆಯಲ್ಲಿ ತಲ್ವಾರ್ ಪ್ರದರ್ಶಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯ ಮಾಹಿತಿ ಪಡೆದು ಶಹಾಪುರ ಪೊಲೀಸ್ ಠಾಣೆಗೆ ದೌಡಾಯಿಸಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದು, ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆಯೂ ಕಮಿಷನರ್ ಸೂಚನೆ ನೀಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ.
ಆಯುಕ್ತರ ಪ್ರತಿಕ್ರಿಯೆ:
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ನಗರ ಸೇರಿದಂತೆ ಹೊರ ಜಿಲ್ಲೆಯಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆಯಿಸು ತ್ತಿದ್ದೇವೆ. ಗಲಾಟೆಯಲ್ಲಿ ೮ ಮಂದಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರಿಕೆಟ್ ವಿಚಾರಕ್ಕೆ ಗಲಾಟೆ ಶುರುವಾಗಿ ನಂತರ ವಿಕೋಪಕ್ಕೆ ತಿರುಗಿದೆ. ಗಲಾಟೆ ಸಂದರ್ಭದಲ್ಲಿ ತಲ್ವಾರ್ ಝಳಪಿಸಿದವರ ಕುರಿತು ಮಾಹಿತಿ ಇದೆ. ಸ್ಥಳದಲ್ಲಿರುವ ಸಿಸಿಟಿವಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಯಾರೂ ಕೂಡಾ ಸುಳ್ಳು ವದಂತಿಗಳನ್ನು ಹರಡಿಸಬಾರದು. ಅಂಥ ಕೃತ್ಯ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ಎಚ್ಚರಿಕೆ ನೀಡಿದರು.