ದ್ವಾರಕಾದಲ್ಲಿ ಮೋದಿ ಪ್ರಚಾರ: ಬಿಗಿ ಭದ್ರತೆ
ನವದೆಹಲಿ,ಮೇ.೨೨- ರಾಷ್ಟ್ರ ರಾಜಧಾನಿ ದೆಹಲಿಯ ಎಲ್ಲಾ ೭ ಲೋಕಸಭಾ ಕ್ಷೇತ್ರಗಳಿಗೆ ಇದೇ ೨೫ ರಂದು ೬ನೇ ಹಂತದಲ್ಲಿ ಮತದಾನ ನಡೆಯಲಿದ್ದು, ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ದ್ವಾರಕರಾದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಲಿರುವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಹಲವು ಮಾರ್ಗಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಪ್ರಧಾನಿ ಅವರು ಸಮಾವೇಶ ನಡೆಸಲಿರುವ ದ್ವಾರಕಕ್ಕೆ ಭೇಟಿ ನೀಡುವ ಎಲ್ಲಾ ರಸ್ತೆಗಳನ್ನು ನಿರ್ಬಂಧಿಸಲಾಗಿದ್ದು ಪರ್ಯಾಯ ಮಾರ್ಗಗಳ ಮೂಲಕ ವಾಹನ ಸಂಚಾರರರು ತೆರಳುವಂತೆ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನೈಋತ್ಯ ದೆಹಲಿಯ ದ್ವಾರಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಲಿ ನಡೆಯಲಿದ್ದು ಪೊಲೀಸರು ಸಂಚಾರ ಮಾರ್ಗಗಳ ಬಗ್ಗೆ ಸಲಹೆ ನೀಡಿದ್ದಾರೆ ಮತ್ತು ಕೆಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಪ್ರಯಾಣಿಕರನ್ನು ಮನವಿ ಮಾಡಿದ್ದಾರೆ.
ಬುಧವಾರ ಸಂಜೆ ೬ ಗಂಟೆಗೆ ದ್ವಾರಕಾ ಸೆಕ್ಟರ್-೧೪ರ ಡಿಡಿಎ ಪಾರ್ಕ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನಿಗದಿಯಾಗಿದ್ದು, ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುತ್ತಮುತ್ತಲಿನ ರಸ್ತೆಗಳಲ್ಲಿನ ಸಂಚಾರ ಗಮನಾರ್ಹವಾಗಿ ಪರಿಣಾಮ ಬೀರಬಹುದು ಎನ್ನುವ ಉದ್ದೇಶದಿಂದ ಬೆಳಗ್ಗೆಯಿಂದಲೇ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಕೆಲಸಲಹೆ ನೀಡಿದ್ದಾರೆ.
ಬಸ್ ನಿಲ್ದಾಣ, ರೈಲು ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಿಗೆ ಹೋಗುವ ಜನರು ತಮ್ಮ ಪ್ರಯಾಣವನ್ನು ಎಚ್ಚರಿಕೆಯಿಂದ ಯೋಜಿಸಲು ಸೂಚಿಸಲಾಗಿದೆ. ವಾಹನ ಚಾಲಕರು ತಾಳ್ಮೆಯಿಂದಿರಿ, ಸಂಚಾರ ನಿಯಮಗಳು ಮತ್ತು ರಸ್ತೆ ಶಿಸ್ತುಗಳನ್ನು ಗಮನಿಸಿ ಮತ್ತು ಎಲ್ಲಾ ಛೇದಕಗಳಲ್ಲಿ ನಿಯೋಜಿಸಲಾದ ಸಂಚಾರ ಸಿಬ್ಬಂದಿಯ ನಿರ್ದೇಶನಗಳನ್ನು ಅನುಸರಿಸಿ ಎಂದಿದ್ದಾರೆ.
ರಾಷ್ಟ್ರ ರಾಜಧಾನಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳಿಗೆ ಮೇ ೨೫ ರಂದು ಮತದಾನ ನಡೆಯಲಿದೆ. ರಾಷ್ಟ್ರ ರಾಜಧಾನಿಯು ಎರಡು ಅಸಾಧಾರಣ ಸ್ಪರ್ಧಿಗಳ ನಡುವಿನ ಪೈಪೋಟಿಗೆ ಸಾಕ್ಷಿಯಾಗಿದೆ. ಆಡಳಿತಾರೂಢ ಬಿಜೆಪಿ ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿದೆ.