ಅಮೆರಿಕದಲ್ಲಿ ರಸ್ತೆ ಅಪಘಾತ ಮೂವರು ಭಾರತೀಯ ವಿದ್ಯಾರ್ಥಿಗಳ ಸಾವು
ವಾಷಿಂಗ್ಟನ್,ಮೇ.೨೨- ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಸಾವಿನ ಸರಣಿ ಮುಂದುವರಿದಿದ್ದು, ಕಳೆದ ವಾರ ಜಾರ್ಜಿಯಾದ ಆಲ್ಫಾರೆಟ್ಟಾ ಬಳಿ ನಡೆದ ಕಾರು ಅಪಘಾತದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಆರ್ಯನ್ ಜೋಷಿ, ಶ್ರಿಯಾ ಅವಸರಳ ಮತ್ತು ಅನ್ವಿ ಶರ್ಮಾ ಮೃತ ವಿದ್ಯಾರ್ಥಿಗಳಾಗಿದ್ದು,ಇವರೆಲ್ಲರೂ ೧೮ ವರ್ಷದವರು ಎಂದು ಮೂಲಗಳು ತಿಳಿಸಿವೆ.
ಮೃತರ ಪೈಕಿ ಆರ್ಯನ್ ಜೋಷಿ, ಶ್ರೀಯಾ ಅವಸರಳ ಸ್ಥಳದಲ್ಲೇ ಅಸುನೀಗಿದ್ದರೆ, ಅನ್ವಿ ಶರ್ಮಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಗಾಯಗೊಂಡ ಋತ್ವಿಕ್ ಸೋಮೆಪಳ್ಳಿ ಹಾಗೂ ಮೊಹಮ್ಮದ್ ಲಿಯಾಕತ್ ಅವರಿಗೆ ಆಲ್ಫಾರೆಟ್ಟಾದಲ್ಲಿನ ನಾರ್ತ್ ಫುಲ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಐವರು ಆಲ್ಫಾರೆಟ್ಟಾ ಹೈಸ್ಕೂಲ್ ಮತ್ತು ಜಾರ್ಜಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು. ಇವರಿದ್ದ ಕಾರು ಅತಿ ವೇಗದಲ್ಲಿ ಸಂಚರಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕನ ನಿಯಂತ್ರಣಕ್ಕೆ ಸಿಗದೆ ಮೇ ೧೪ರಂದು ಕಾರು ಆಲ್ಫಾರೆಟ್ಟಾ ಬಳಿ ಅಪಘಾತಕ್ಕೀಡಾಗಿತ್ತು. ಚಾಲಕನ ನಿಯಂತ್ರಣ ತಪ್ಪಿದ ನಂತರ ವೇಗವಾಗಿ ಚಲಿಸುತ್ತಿದ್ದ ಕಾರು ಪಲ್ಟಿಯಾಗಿ ತಲೆಕೆಳಗಾಗಿ ನಿಂತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ತೀವ್ರತೆಯನ್ನು ವಿವರಿಸಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳು
ಇವರೆಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದು, ಶ್ರೀಯಾ ಅವಸರಳ ಯುಜಿಎ ಶಿಕಾರಿ ಡ್ಯಾನ್ಸ್ ತಂಡದ ಸದಸ್ಯೆಯಾಗಿದ್ದರು. ಇನ್ನು ಅನ್ವಿ ಶರ್ಮಾ ಯುಜಿಎ ಕಲಾಕಾರ್ ಮತ್ತು ಕ್ಯಾಪೆಲ್ಲ ಗ್ರೂಪ್‌ನ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ನೀವೊಬ್ಬ ಅದ್ಭುತ ಡ್ಯಾನ್ಸರ್. ನಿಮ್ಮ ಕಣ್ಮರೆಯ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶಿಕಾರಿ ತಂಡ ಆಘಾತ ಸೂಚಿಸಿದೆ. ಕಲಾಕಾರ್ ಗ್ರೂಪ್ ಕೂಡ ಅನ್ವಿ ಶರ್ಮಾಗೆ ಶ್ರದ್ಧಾಂಜಲಿ ಸಲ್ಲಿಸಿದೆ.
ಆರ್ಯನ್ ಜೋಷಿ ಮುಂದಿನ ವಾರ ಪದವಿ ಪಡೆಯಲು ಸಿದ್ಧತೆ ನಡೆಸಿಕೊಂಡಿದ್ದರು. ಆಲ್ಫಾರೆಟ್ಟಾ ಹೈ ಕ್ರಿಕೆಟ್ ಟೀಮ್ ತನ್ನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಆರ್ಯನ್ ಜೋಷಿ ನಿಧನಕ್ಕೆ ನೋವು ತೋಡಿಕೊಂಡಿದೆ. ಆರ್ಯನ್ ಜೋಷಿ ನಮ್ಮ ಬಹು ದೊಡ್ಡ ಬೆಂಬಲಿಗರಾಗಿದ್ದರು ಮತ್ತು ತಮ್ಮ ತಂಡದ ಬೆನ್ನೆಲುಬಾಗಿದ್ದರು. ನಮ್ಮ ತಂಡದ ಗೆಲುವಿನಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದು. ಅವರ ಅಗಲಿಕೆ ನಮ್ಮ ಪಾಲಿಗೆ ತುಂಬಲಾರದ ನಷ್ಟ ಎಂದು ಬರೆದುಕೊಂಡಿದೆ.
ಸರಣಿ ಸಾವು:
ಕೆಲವು ದಿನಗಳಿಂದ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸರಣಿ ಸಾವು ಗಾಬರಿ ಹುಟ್ಟಿಸುವಂತಿದೆ. ೨೦೨೪ರ ಆರಂಭದಿಂದ, ಅಮೆರಿಕದಲ್ಲಿ ಕನಿಷ್ಠ ಅರ್ಧ ಡಜನ್ ಭಾರತೀಯ ಮತ್ತು ಭಾರತೀಯ ಮೂಲದ ವಿದ್ಯಾರ್ಥಿಗಳ ಸಾವುಗಳು ಸಂಭವಿಸಿವೆ. ಇವರ ಮೇಲಿನ ದಾಳಿಗಳ ಸಂಖ್ಯೆಯಲ್ಲಿ ಹೆಚ್ಚಳ ಆಗಿದ್ದು, ಸಮುದಾಯದಲ್ಲಿ ಆತಂಕಕ್ಕೂ ಕಾರಣವಾಗಿದೆ.
ಕಳೆದ ಮಾರ್ಚ್‌ನಲ್ಲಿ ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ಭಾರತದ ೩೪ ವರ್ಷದ ಶಾಸ್ತ್ರೀಯ ನೃತ್ಯಗಾರ ಅಮರನಾಥ್ ಘೋಷ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಪರ್ಡ್ಯೂ ವಿಶ್ವವಿದ್ಯಾನಿಲಯದ ೨೩ ವರ್ಷದ ಭಾರತೀಯ-ಅಮೆರಿಕನ್ ವಿದ್ಯಾರ್ಥಿ ಸಮೀರ್ ಕಾಮತ್ ಫೆಬ್ರವರಿ ೫ರಂದು ಇಂಡಿಯಾನಾದ ವನ್ಯ ಉದ್ಯಾನದಲ್ಲಿ ಶವವಾಗಿ ಪತ್ತೆಯಾಗಿದ್ದರು.