ನೇಹಾ, ಅಂಜಲಿ ನಿವಾಸಕ್ಕೆ ಎಡಿಜಿಪಿ ಭೇಟಿ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇಬ್ಬರು ಯುವತಿಯರ ಹತ್ಯೆಯಾಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಈ ಹಿನ್ನಲೆಯಲ್ಲಿ ಈಗ ಹು-ಧಾ ಅವಳಿನಗರಕ್ಕೆ ಭೇಟಿ ನೀಡಿದ್ದೇನೆಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಹೇಳಿದರು.
ನಗರದಲ್ಲಿ ಹತ್ಯೆಯಾದ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪೊಲೀಸ್ ಇಲಾಖೆಯಿಂದ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿ ಚರ್ಚೆ ಮಾಡಲಾಗಿದೆ ಎಂದರು.
ಈಗಾಗಲೇ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆ ಮಾಡುತ್ತಿದೆ. ಅಂಜಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಹು-ಧಾ ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗಿದ್ದರು ಅಧಿಕಾರಿಗಳ ಮೇಲೆ ಕ್ರಮ ಏಕೆ ಆಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇದನ್ನು ನಾನು ಒಪ್ಪುವುದಿಲ್ಲ ಎಂದರು.
ಅಂಜಲಿ ಪ್ರಕರಣದ ಆರೋಪಿಯ ಜೊತೆಗೆ ಕೆಳ ಹಂತದ ಸಿಬ್ಬಂದಿಗಳು ಸಂಪರ್ಕವಿದ್ದಾರೆ ಎಂಬ ವಿಚಾರಕ್ಕೆ ಅವರು ಇದರ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಹಲವು ಸಿಬ್ಬಂದಿಗಳು ಅಂಜಲಿ ಹತಯ ಆರೋಪಿಯ ಜೊತೆಗೆ ಸಂಪರ್ಕವಿರುವುದಾಗಿ ಮಾಹಿತಿ ಬಂದಿದೆ ಅಂತಹ ಸಿಬ್ಬಂದಿಗಳ ಮೇಲೆ ಖಂಡಿತ ಕ್ರಮವಾಗುತ್ತದೆ ಎಂದರು.
2022-23 ರಲ್ಲಿ ಆದ ಪ್ರಕರಣಗಳಿಂದ 2024 ರಲ್ಲಿ ಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಿದೆ. ಇಲ್ಲಿಯ ಇಬ್ಬರು ಯುವತಿಯರ ಹತ್ಯೆ ನಮಗೂ ನೋವುಂಟು ಮಾಡಿದೆ. ಒಂದರ ಮೇಲೊಂದು ಹತ್ಯಯಾದ ಹಿನ್ನಲೆಯಲ್ಲಿ ನಾವು ಅವಳಿನಗರಕ್ಕೆ ಭೇಟಿ ನೀಡಿದ್ದೇವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಇಲಾಖೆಯ ಮೇಲೆ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದು ನುಡಿದರು..