4 ತಲೆಮಾರು ಜೀವನ ಕೈ ನಿಂದ ನಾಶ
ನವದೆಹಲಿ,ಮೇ೨೧:ಭಾರತ ಮೈತ್ರಿಕೂಟದ ಪಾಪಗಳೊಂದಿಗೆ ೨೧ನೇ ಶತಮಾನ ಮುಂದುವರೆಯಲು ಸಾಧ್ಯವಿಲ್ಲ. ಕಳೆದ ೬೦ ವರ್ಷಗಳಲ್ಲಿ ೩ ರಿಂದ ೪ ತಲೆಮಾರು ಜೀವನವನ್ನು ಕಾಂಗ್ರೆಸ್ ಮೈತ್ರಿಕೂಟ ನಾಶಪಡಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ.
ಅವರು ಲೋಕಸಭಾ ಚುನಾವಣೆ ೬ನೇ ಹಂತದ ಚುನಾವಣೆಗಾಗಿ ಬಿಹಾರದ ಪೂರ್ವ ಚಂಪಾರಣ್‌ನಲ್ಲಿ ಏರ್ಪಡಿಸಿದ್ದ ರ್‍ಯಾಲಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ೨೧ನೇ ಶತಮಾನ ಭಾರತ ಮೈತ್ರಿಕೂಟದ ಪಾಪಗಳೊಂದಿಗೆ ನಡೆಯಲು ಸಾಧ್ಯವಿಲ್ಲ. ಭ್ರಷ್ಟಾಚಾರ, ತುಷ್ಠೀಕರಣದ ರಾಜಕಾರಣ, ತುಕುಡೆ ಗ್ಯಾಂಗ್ ವಿರುದ್ಧ ಜೂ. ೪ ರಂದು ನಿರ್ಣಾಯಕ ನಿಲುವು ಹೊರಬರಲಿದೆ.
೫ನೇ ಹಂತದಲ್ಲಿ ಮೈತ್ರಿಕೂಟವನ್ನು ಸಂಪೂರ್ಣವಾಗಿ ಸೋಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿಯಂತಹ ಭ್ರಷ್ಟ ಪಕ್ಷಗಳು ಆಡಳಿತ ನಡೆಸಲು ಜನತೆ ಅವಕಾಶ ನೀಡಿಲ್ಲ ಎಂದರು.
ಕಳೆದ ೬೦ ವರ್ಷಗಳಿಂದ ಕಾಂಗ್ರೆಸ್ ದೇಶವನ್ನು ಹಾಳುಗೆಡವಿದೆ. ದೇಶದ ೩ ರಿಂದ ೪ ತಲೆಮಾರುಗಳ ಜೀವನವನ್ನು ನಾಶಪಡಿಸಲಾಗಿದೆ. ಈ ೬೦ ವರ್ಷಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟದ ನಾಯಕರುಗಳು ಅರಮನೆಯಂತಹ ಮನೆಗಳನ್ನು ನಿರ್ಮಿಸಿ ವಾಸಿಸುತ್ತಿದ್ದಾರೆ.
ಭಾರತದಲ್ಲಿ ನಿಮ್ಮ ಮಕ್ಕಳಿಗೆ ಓದಲು ಶಾಲೆ ಇರಲಿಲ್ಲ. ಆದರೆ, ಅವರ ಮಕ್ಕಳು ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದರು. ಬಡವರು ಬಡವರಾಗಿಯೇ ಮುಂದುವರೆದರೆಂದು ಮೋದಿ ವಾಗ್ದಾಳಿ ನಡೆಸಿದರು.
ಆರ್‌ಜೆಡಿ ನಾಯಕ ತೇಜಸ್ವಿಯಾದವ್ ವಿರುದ್ಧ ಪರೋಕ್ಷವಾಗಿ ದಾಳಿ ನಡೆಸಿದ ಪ್ರಧಾನಿ ಮೋದಿ, ಬೆಳ್ಳಿ ಚಮಚದೊಂದಿಗೆ ಹುಟ್ಟಿದವರಿಗೆ ಕಠಿಣ ಪರಿಶ್ರಮ ತಿಳಿದಿಲ್ಲ.ಜೂ. ೪ ರಂದು ಮೋದಿಗೆ ಬೆಡ್ ರೆಸ್ಟ್ ಎಂದು ಯಾರೋ ಹೇಳಿದ್ದನ್ನು ನಾನು ಕೇಳಿದ್ದೇನೆ. ದೇಶದ ಯಾವುದೇ ನಾಗರಿಕ ಜೀವನದಲ್ಲಿ ಬೆಡ್‌ರೆಸ್ಟ್ ಇರಬಾರದೆಂದು ನಾನು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಮೇ ೨೫ ರಂದು ಲೋಕಸಭಾ ಚುನಾವಣೆಯ ೬ನೇ ಹಂತದ ಚುನಾವಣೆ ನಡೆಯಲಿದ್ದು, ಜೂ. ೪ ರಂದು ಮತ ಎಣಿಕೆ ನಡೆಯಲಿದೆ.